ರೈತರು ಬೆಳೆಯುವ ಬೆಳೆ ಪ್ರಕೃತಿಯ ಮೇಲೆ ಅವಲಂಬಿತವಾಗಿರುತ್ತದೆ. ಅತಿ ಹೆಚ್ಚು ಮಳೆ ಬಂದರೂ ಕಷ್ಟ ಕಡಿಮೆಯಾದರೂ ಕಷ್ಟ ಎಂಬ ಸ್ಥಿತಿ ಅನ್ನದಾತರದ್ದು. ಒಂದೊಮ್ಮೆ ಬೆಳೆ ಚೆನ್ನಾಗಿ ಬಂದರೂ ಸಹ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದೆ ತಾವು ಹೂಡಿದ ಹಣವನ್ನು ಸಹ ಒಮ್ಮೊಮ್ಮೆ ಪಡೆದುಕೊಳ್ಳುವುದು ರೈತರಿಗೆ ಕಷ್ಟ. ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ರೈತರಿಗೆ ಬೆಳೆ ಹಾನಿಯಾದರೆ ಆ ನಷ್ಟವನ್ನು ಭರಿಸಿ ಕೊಡಲು ಕೇಂದ್ರ ಸರ್ಕಾರ ವಿಮಾ ಯೋಜನೆಯನ್ನು ಜಾರಿಗೆ ತಂದಿದೆ.
ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದ್ದು, ಆದರೆ ಬಹುತೇಕ ರೈತರಿಗೆ ಇದರ ಕುರಿತು ಸೂಕ್ತ ಮಾಹಿತಿ ಇಲ್ಲದ ಕಾರಣ ಬೆಳೆ ನಷ್ಟಕ್ಕೊಳಗಾದ ಸಂದರ್ಭದಲ್ಲಿ ಯಾವುದೇ ಪರಿಹಾರಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ಮುಂಬರುವ ಮುಂಗಾರು ಅವಧಿಯಲ್ಲಿ ವಿಮಾ ಪಾಲಿಸಿಗಳನ್ನು ರೈತರ ಮನೆ ಬಾಗಿಲಿಗೇ ತಲುಪಿಸುವ ಅಭಿಯಾನವನ್ನು ಆರಂಭಿಸಿದೆ.
‘ಮೇರಿ ಪಾಲಿಸಿ ಮೇರಿ ಹಾಥ್’ ಎಂಬ ಹೆಸರಿನ ಈ ಅಭಿಯಾನವು ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆ ಜಾರಿಯಲ್ಲಿರುವ ಎಲ್ಲ ರಾಜ್ಯಗಳಲ್ಲೂ ಸಹ ಆರಂಭವಾಗಲಿದೆ. ಅಲ್ಲದೆ ಪಾಲಿಸಿಯ ವಿವರ, ಕ್ಲೇಮ್ ಪ್ರಕ್ರಿಯೆ ಸೇರಿದಂತೆ ಹಲವು ಮಾಹಿತಿಗಳನ್ನು ಸಂಬಂಧಪಟ್ಟ ರೈತರಿಗೆ ಈ ಸಂದರ್ಭದಲ್ಲಿ ನೀಡಲಾಗುತ್ತದೆ ಎಂದು ಕೇಂದ್ರ ಕೃಷಿ ಸಚಿವಾಲಯ ತಿಳಿಸಿದೆ.