ಹಸಿ ಶುಂಠಿ ಮತ್ತು ಒಣ ಶುಂಠಿಯ ದರದಲ್ಲಿ ಭಾರಿ ಏರಿಕೆಯಾಗಿದ್ದು, ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಹಸಿ ಶುಂಠಿ ಕ್ವಿಂಟಾಲ್ ಗೆ 16 ಸಾವಿರದಿಂದ 19 ಸಾವಿರ ರೂಪಾಯಿಗಳಾಗಿದ್ದು, ಒಣಶುಂಠಿ ಕ್ವಿಂಟಾಲ್ ಗೆ 28 ಸಾವಿರ ರೂಪಾಯಿ ಇದೆ. ಹಸಿ ಶುಂಠಿಗೇ ಭಾರಿ ಬೆಲೆ ಸಿಗುತ್ತಿರುವುದರಿಂದ ಒಣಗಿಸುವ ಉಸಾಬರಿಗೆ ಹೋಗದೆ ಬೆಳೆಗಾರರು ಮಾರಾಟ ಮಾಡುತ್ತಿದ್ದಾರೆ.
ನಾಲ್ಕೈದು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಶುಂಠಿಗೆ ಇಷ್ಟೊಂದು ಬೆಲೆ ಬಂದಿದೆ ಎನ್ನಲಾಗಿದ್ದು, ಆಂಧ್ರಪ್ರದೇಶ, ಕೇರಳ, ಮಹಾರಾಷ್ಟ್ರ ಹಾಗೂ ಉತ್ತರ ಭಾರತದಲ್ಲಿ ಶುಂಠಿ ಇಳುವರಿ ಕುಸಿತವಾಗಿರುವುದರಿಂದ ರಾಜ್ಯದ ಹಸಿ ಶುಂಠಿಗೆ ಬೇಡಿಕೆ ಹೆಚ್ಚಾಗಿದೆ ಎಂದು ಹೇಳಲಾಗಿದೆ.
ಆದರೆ ರಾಜ್ಯದಲ್ಲಿ ಈ ಬಾರಿ ರೋಗಬಾಧೆ, ಮಳೆ ಸೇರಿದಂತೆ ಇತರೆ ಕಾರಣಗಳಿಂದ ಶುಂಠಿ ಬೆಳೆ ಹಾಳಾಗಿದ್ದು, ಜೊತೆಗೆ ಬಹಳಷ್ಟು ಬೆಳಗಾರರು ಮೂರುವರೆ ಸಾವಿರದಿಂದ ನಾಲ್ಕೂವರೆ ಸಾವಿರ ರೂಪಾಯಿಗಳ ದರ ಇದ್ದಾಗಲೇ ಮಾರಾಟ ಮಾಡಿದ್ದಾರೆ. ಹೀಗಾಗಿ ಈವರೆಗೆ ಶುಂಠಿಯನ್ನು ಇಟ್ಟುಕೊಂಡಿದ್ದ ಬೆಳಗಾರರಿಗೆ ಬಂಪರ್ ದರ ಸಿಗುವಂತಾಗಿದೆ.