ಈಗಾಗ್ಲೇ ಬಿರು ಬೇಸಿಗೆ ಆರಂಭವಾಗಿಬಿಟ್ಟಿದೆ. ಹಾಗಾಗಿ ಕಡಿಮೆ ನೀರು ಕುಡಿಯುವ ಅಭ್ಯಾಸವಿರುವವರಿಗೆ ಕೂಡ ಇನ್ಮೇಲೆ ಹೆಚ್ಚಿನ ಪ್ರಮಾಣದ ನೀರಿನ ಅಗತ್ಯವಿರುತ್ತದೆ.
ಹೆಚ್ಚಿನವರು ಚಳಿಗಾಲದಲ್ಲಿ ನೀರು ಕುಡಿಯುವುದನ್ನು ಕಡಿಮೆ ಮಾಡುತ್ತಾರೆ. ಆದರೆ ಬೇಸಿಗೆಯಲ್ಲಿ ಬಲವಾದ ಸೂರ್ಯನ ಶಾಖ ಮತ್ತು ಬೆವರುವಿಕೆಯಿಂದಾಗಿ ದೇಹದಲ್ಲಿ ಇರುವ ನೀರಿನ ಪ್ರಮಾಣವು ಕಡಿಮೆಯಾಗುತ್ತಾ ಹೋಗುತ್ತದೆ.
ಇದರಿಂದಾಗಿ ನಿರ್ಜಲೀಕರಣವು ಸಂಭವಿಸಬಹುದು. ಡಿಹೈಡ್ರೇಶನ್‌ನಿಂದ ಪಾರಾಗಲು ದೇಹಕ್ಕೆ ಸಾಕಷ್ಟು ಪ್ರಮಾಣದ ನೀರು ಬೇಕಾಗುತ್ತದೆ. ನೀರು ಕುಡಿಯುವುದರಿಂದ ಆಗುವ ಲಾಭಗಳ ಬಗ್ಗೆ ಎಲ್ಲರಿಗೂ ಗೊತ್ತು. ಬೆಳಿಗ್ಗೆ ಎದ್ದ ತಕ್ಷಣ ನೀರು ಕುಡಿಯುವುದರಿಂದ ಆರೋಗ್ಯಕ್ಕೆ ದುಪ್ಪಟ್ಟು ಲಾಭವಿದೆ.
ನಿರ್ಜಲೀಕರಣದಿಂದ ಪರಿಹಾರ – ರಾತ್ರಿಯಿಡೀ ನಿದ್ದೆ ಮಾಡುವುದರಿಂದ ಹಲವು ಗಂಟೆಗಳ ಕಾಲ ನಾವು ನೀರಿನಿಂದ ವಂಚಿತರಾಗುತ್ತೇವೆ. ಬೇಸಿಗೆಯಲ್ಲಿ ನಿದ್ದೆ ಮಾಡುವಾಗ ಅನೇಕರು ಬೆವರುತ್ತಾರೆ. ಇದು ದೇಹದಲ್ಲಿ ನೀರಿನ ಕೊರತೆಯನ್ನು ಉಂಟುಮಾಡಬಹುದು, ಇದು ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ. ಈ ಕಾರಣಕ್ಕಾಗಿಯೇ ಎಲ್ಲರೂ ಬೆಳಗ್ಗೆ ಎದ್ದ ತಕ್ಷಣ ನೀರು ಕುಡಿಯಬೇಕು, ಅದರಲ್ಲೂ ಬೇಸಿಗೆ ಕಾಲದಲ್ಲಿ.
ಮೂತ್ರಪಿಂಡದ ಕಲ್ಲು ತಡೆಗಟ್ಟುತ್ತದೆ – ಬೆಳಗ್ಗೆ ಎದ್ದ ತಕ್ಷಣ ನೀರು ಕುಡಿಯುವುದರಿಂದ ಮೂತ್ರಪಿಂಡದ ಕಲ್ಲುಗಳ ಅಪಾಯವನ್ನು ಕಡಿಮೆ ಮಾಡಬಹುದು. ಬೆಳಗ್ಗೆ ನೀರು ಕುಡಿಯುವುದು ಹೊಟ್ಟೆಯ ಆಮ್ಲವನ್ನು ಶಾಂತಗೊಳಿಸಲು ಮತ್ತು ಕಲ್ಲುಗಳ ಬೆಳವಣಿಗೆಯನ್ನು ತಡೆಯಲು ಸಹಾಯ ಮಾಡುತ್ತದೆ.
ಡಲ್ ಸ್ಕಿನ್‌ನಿಂದ ಪರಿಹಾರ – ತ್ವಚೆಯು ಮಂಕಾಗಿದ್ದರೆ ಎದ್ದ ನಂತರ ಮಾಡಬೇಕಾದ ಮೊದಲ ಕೆಲಸವೆಂದರೆ ನೀರು ಕುಡಿಯುವುದು. ಏಕೆಂದರೆ ಇದು ರಕ್ತ ಪರಿಚಲನೆಯನ್ನು ಉತ್ತೇಜಿಸುತ್ತದೆ. ಹೊಸ ಕೋಶಗಳ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ.
ಇಮ್ಯೂನಿಟಿ- ಬೆಳಗ್ಗೆ ನೀರು ಕುಡಿಯುವುದು ಹೊಟ್ಟೆಯಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದು ದುಗ್ಧರಸ ವ್ಯವಸ್ಥೆಯನ್ನು ಸಮತೋಲನಗೊಳಿಸುತ್ತದೆ ಮತ್ತು ಕಾಲಾನಂತರದಲ್ಲಿ ರೋಗ ನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ. ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗುವ ಸಮಸ್ಯೆಯಿದ್ದರೆ ಬೆಳಗ್ಗೆ ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ.
ತೂಕ ನಷ್ಟ– ಬೆಳಗ್ಗೆ ಎದ್ದ ತಕ್ಷಣ ನೀರು ಕುಡಿಯುವ ಅಭ್ಯಾಸವನ್ನು ರೂಢಿಸಿಕೊಂಡರೆ, ಅದು ಚಯಾಪಚಯ ಮತ್ತು ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ತೂಕ ನಷ್ಟಕ್ಕೆ ಕೂಡ ಸಹಾಯ ಮಾಡುತ್ತದೆ. ಬೆಳಗ್ಗೆ ಎದ್ದ ತಕ್ಷಣ ಕನಿಷ್ಟ ಒಂದರಿಂದ ಎರಡು ಲೋಟ ನೀರು ಕುಡಿಯಿರಿ.