ನಮ್ಮ ಜೀವನಶೈಲಿ ಮತ್ತು ದೇಹದ ಅಗತ್ಯಗಳಿಗೆ ಅನುಗುಣವಾಗಿ ವೈದ್ಯರು ದಿನಕ್ಕೆ 8 ರಿಂದ 10 ಗ್ಲಾಸ್ ನೀರು ಕುಡಿಯುವಂತೆ ಶಿಫಾರಸು ಮಾಡುತ್ತಾರೆ. ಬಹುತೇಕರು ತಣ್ಣೀರನ್ನು ಕುಡಿಯುತ್ತಾರೆ. ಆಯುರ್ವೇದದ ಪ್ರಕಾರ ಬೆಚ್ಚಗಿನ ನೀರನ್ನು ಕುಡಿಯುವುದು ಸೂಕ್ತ. ವಿಶೇಷವಾಗಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರು ಕುಡಿಯಬೇಕು. ಏಕೆಂದರೆ ಅದು ದೇಹವನ್ನು ಒಳಗಿನಿಂದ ಗುಣಪಡಿಸುತ್ತದೆ, ಚಯಾಪಚಯವನ್ನು ಹೆಚ್ಚಿಸುತ್ತದೆ ಮತ್ತು ಜೀರ್ಣಕ್ರಿಯೆಯನ್ನೂ ಸುಧಾರಿಸುತ್ತದೆ.
ಬೆಳಗ್ಗೆ ಎದ್ದ ನಂತರ ಹಲ್ಲುಜ್ಜದೇ ನೀರು ಕುಡಿಯಬೇಕಾ ಅಥವಾ ಹಲ್ಲುಜ್ಜಿ ನೀರು ಕುಡಿಯಬೇಕಾ ಎಂಬ ಗೊಂದಲ ಎಲ್ಲರಲ್ಲೂ ಇದೆ. ತಜ್ಞರ ಪ್ರಕಾರ ಬೆಳಗ್ಗೆ ಹಲ್ಲುಜ್ಜದೆ ನೀರು ಕುಡಿಯುವುದು ಹೆಚ್ಚು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಹೀಗೆ ಮಾಡುವುದರಿಂದ ಜೀರ್ಣ ಶಕ್ತಿ ಬಲಗೊಳ್ಳುತ್ತದೆ. ದಿನದಲ್ಲಿ ಏನು ತಿಂದರೂ ಚೆನ್ನಾಗಿ ಜೀರ್ಣವಾಗುತ್ತದೆ. ಇದಲ್ಲದೇ ಹಲ್ಲುಜ್ಜದೆ ನೀರು ಕುಡಿಯುವುದರಿಂದ ಹಲವಾರು ರೋಗಗಳು ನಿವಾರಣೆಯಾಗುತ್ತವೆ.
ಬೆಳಗ್ಗೆ ನೀರು ಕುಡಿಯುವುದರಿಂದಾಗುವ ಪ್ರಯೋಜನಗಳು…
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ಆರೋಗ್ಯ ಸುಧಾರಿಸುತ್ತದೆ. ದಿನವಿಡೀ ನಮ್ಮನ್ನು ಹೈಡ್ರೀಕರಿಸುತ್ತದೆ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತವೆ. ಚರ್ಮವೂ ಆರೋಗ್ಯಕರವಾಗಿರುತ್ತದೆ. ಹಲ್ಲುಜ್ಜದೆ ನೀರು ಕುಡಿಯುವುದರಿಂದ ರೋಗನಿರೋಧಕ ಶಕ್ತಿಯೂ ಹೆಚ್ಚುತ್ತದೆ. ನೀವು ಆಗಾಗ್ಗೆ ಶೀತ, ಕೆಮ್ಮಿನಿಂದ ಬಳಲುತ್ತಿದ್ದರೆ, ಪ್ರತಿದಿನ ಬೆಳಗ್ಗೆ ಹಲ್ಲುಜ್ಜದೆ ನೀರನ್ನು ಕುಡಿಯಿರಿ. ಉದ್ದ, ದಪ್ಪ ಕೂದಲು ಮತ್ತು ಹೊಳೆಯುವ ಚರ್ಮಕ್ಕಾಗಿ, ಹಲ್ಲುಜ್ಜದೆ ಬೆಳಗ್ಗೆ ನೀರನ್ನು ಕುಡಿಯಬೇಕು.
ಮಲಬದ್ಧತೆ, ಬಾಯಿ ಹುಣ್ಣು, ಹುಳಿತೇಗು ಸಮಸ್ಯೆಯೂ ಇದರಿಂದ ದೂರವಾಗುತ್ತದೆ. ಬಾಯಿ ದುರ್ವಾಸನೆ ಇರುವವರು ಬೆಳಗ್ಗೆ ಎದ್ದು ಒಂದು ಲೋಟ ಉಗುರು ಬೆಚ್ಚನೆಯ ನೀರನ್ನು ಕುಡಿಯಬೇಕು. ಲಾಲಾರಸದ ಕೊರತೆಯಿಂದಾಗಿ ನಮ್ಮ ಬಾಯಿ ಒಣಗುತ್ತದೆ ಮತ್ತು ಬ್ಯಾಕ್ಟೀರಿಯಾಗಳು ಉತ್ಪತ್ತಿಯಾಗುತ್ತವೆ. ಇದರಿಂದಾಗಿ ಬಾಯಿಯಿಂದ ಕೆಟ್ಟ ವಾಸನೆ ಬರಲಾರಂಭಿಸುತ್ತದೆ. ಈ ಸಮಸ್ಯೆಯನ್ನು ಹೋಗಲಾಡಿಸಲು ಪ್ರತಿ ದಿನ ಬೆಳಗ್ಗೆ ಎದ್ದು ಒಂದು ಲೋಟ ಉಗುರು ಬೆಚ್ಚನೆಯ ನೀರನ್ನು ಕುಡಿಯಿರಿ