ಕಳಪೆ ಆಹಾರ ಮತ್ತು ಒತ್ತಡದ ಜೀವನಶೈಲಿಯಿಂದಾಗಿ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಲ್ಲೂ ಗ್ಯಾಸ್ಟ್ರಿಕ್ ಸಮಸ್ಯೆ ಕಾಣಿಸಿಕೊಳ್ತಿದೆ. ಕೆಲವೊಮ್ಮೆ ಇದು ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಕಾಯಿಲೆಯಿಂದಲೂ ಅತಿಯಾದ ಗ್ಯಾಸ್ಟ್ರಿಕ್ ಉಂಟಾಗಬಹುದು. ಸಮಯಕ್ಕೆ ಸರಿಯಾಗಿ ಈ ಸಮಸ್ಯೆಗೆ ಔಷಧ ತೆಗೆದುಕೊಳ್ಳದೇ ಇದ್ದಲ್ಲಿ ಅದು ಮಾರಣಾಂತಿಕವಾಗಿ ಪರಿಣಮಿಸುವ ಅಪಾಯವಿರುತ್ತದೆ.
ಕೆಲವರಿಗೆ ಬೆಳಗ್ಗೆ ಹೊಟ್ಟೆಯಲ್ಲಿ ಗ್ಯಾಸ್ ಉಂಟಾಗುತ್ತದೆ. ಇದಕ್ಕೆ ಕೆಲವೊಂದು ಪರಿಣಾಮಕಾರಿ ಮನೆಮದ್ದುಗಳಿವೆ. ಬೆಳಿಗ್ಗೆ ಹೊಟ್ಟೆಯಲ್ಲಿ ಗ್ಯಾಸ್ ತುಂಬಿಕೊಳ್ಳಲು ಹಲವು ಕಾರಣಗಳಿರುತ್ತವೆ. ರಾತ್ರಿಯ ಊಟಕ್ಕೆ ನೀವು ಹೆಚ್ಚು ಸಲಾಡ್ ಸೇವಿಸಿದರೆ ನಿಮಗೆ ಗ್ಯಾಸ್ ಸಮಸ್ಯೆ ಎದುರಾಗಬಹುದು. ಬೀನ್ಸ್, ಎಲೆಕೋಸು ಮತ್ತು ಹೂಕೋಸು ಹೊಟ್ಟೆಯಲ್ಲಿ ಗ್ಯಾಸ್ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಕಡಿಮೆ ನೀರು ಕುಡಿಯುವವರಲ್ಲಿಯೂ ಗ್ಯಾಸ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಅನೇಕ ಮಹಿಳೆಯರಲ್ಲಿ ಋತುಚಕ್ರದ ಸಮಯದಲ್ಲಿ ಹಾರ್ಮೋನುಗಳ ಅಸಮತೋಲನವು ಹೊಟ್ಟೆಯಲ್ಲಿ ಗ್ಯಾಸ್‌ಗೆ ಕಾರಣವಾಗುತ್ತದೆ. ಏಕೆಂದರೆ ಕೆಲವು ಹಾರ್ಮೋನುಗಳು ಹೊಟ್ಟೆಯ ಚಲನಶೀಲತೆಯನ್ನು ಕಡಿಮೆ ಮಾಡುತ್ತವೆ. ಹೊಟ್ಟೆಯಲ್ಲಿ ಸೋಂಕಿನಿಂದಾಗಿ ಅನೇಕರಿಗೆ ಗ್ಯಾಸ್ಟ್ರಿಕ್ ಕಾಣಿಸಿಕೊಳ್ಳಬಹುದು. ಡೈವರ್ಟಿಕ್ಯುಲೈಟಿಸ್, ಅಲ್ಸರೇಟಿವ್, ಕರುಳಿನ ಸಮಸ್ಯೆ, ಕೊಲೈಟಿಸ್, ಕ್ರೋನ್ಸ್ ಕಾಯಿಲೆ ಮತ್ತು ಮಧುಮೇಹ ಇದ್ದಲ್ಲಿ ಗ್ಯಾಸ್ ರೂಪುಗೊಳ್ಳುತ್ತದೆ.
ಆಹಾರದಲ್ಲಿ ವ್ಯತ್ಯಾಸವಾಗಿ ಗ್ಯಾಸ್ ತುಂಬಿಕೊಂಡಿದ್ದರೆ ಅದರಿಂದ ಪರಿಹಾರ ಪಡೆಯಲು ಲಘುವಾಗಿ ಕೈಗಳಿಂದ ಹೊಟ್ಟೆಗೆ ಮಸಾಜ್ ಮಾಡಬೇಕು. ಈ ವಿಧಾನವು ತುಂಬಾ ಪರಿಣಾಮಕಾರಿಯಾಗಿದೆ. ಇದು ಹೊಟ್ಟೆಯಲ್ಲಿರುವ ಅನಿಲವನ್ನು ತೆಗೆದುಹಾಕುತ್ತದೆ. ಸ್ವಲ್ಪ ಕೊಬ್ಬರಿ ಎಣ್ಣೆಯನ್ನು ತೆಗೆದುಕೊಂಡು ಹೊಟ್ಟೆಗೆ ಹಚ್ಚಿ ನಿಧಾನವಾಗಿ ಮಸಾಜ್ ಮಾಡಿ.
ಆಪಲ್ ವಿನೆಗರ್ ಕೂಡ ಗ್ಯಾಸ್ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಇದರಲ್ಲಿ ಫೈಬರ್ ಹೇರಳವಾಗಿ ಕಂಡುಬರುತ್ತದೆ. ಒಂದು ಲೋಟ ಉಗುರು ಬೆಚ್ಚಗಿನ ನೀರನ್ನು ತೆಗೆದುಕೊಂಡು ಅದಕ್ಕೆ ಒಂದು ಚಮಚ ಆಪಲ್ ಸೈಡರ್ ವಿನೆಗರ್ ಸೇರಿಸಿಕೊಂಡು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಹೀಗೆ ಮಾಡುವುದರಿಂದ ಗ್ಯಾಸ್ ಸಮಸ್ಯೆ ನಿವಾರಣೆಯಾಗುತ್ತದೆ.