ಪ್ರತಿಯೊಬ್ಬರೂ ರೋಗಗಳಿಂದ ಮುಕ್ತರಾಗಬೇಕೆಂದು ಬಯಸುತ್ತಾರೆ. ಉತ್ತಮ ಜೀವನಶೈಲಿ ಮತ್ತು ಆಹಾರ ಪದ್ಧತಿಗೆ ಗಮನ ಕೊಟ್ಟರೆ ಆರೋಗ್ಯವಾಗಿರಲು ಸಾಧ್ಯ. ಅಕಸ್ಮಾತ್ ದೇಹದಲ್ಲಿ ಏನಾದರೂ ಸಮಸ್ಯೆ ಇದ್ದರೆ ಆರಂಭದಲ್ಲಿ ಕೆಲವೊಂದು ಸೂಚನೆಗಳನ್ನು ನಾವು ಅರ್ಥಮಾಡಿಕೊಳ್ಳಬೇಕು. ಬೆಳಗ್ಗೆ ಎದ್ದ ನಂತರ ಕೆಲವು ಲಕ್ಷಣಗಳು ಕಂಡುಬಂದರೆ ನಿರ್ಲಕ್ಷಿಸಬೇಡಿ. ಏಕೆಂದರೆ ಈ ಲಕ್ಷಣಗಳು ಪ್ರಮುಖ ಕಾಯಿಲೆಗಳ ಸಂಕೇತವಾಗಿರಬಹುದು.
ಗಂಟಲು ಒಣಗುವುದು – ಬೆಳಗ್ಗೆ ಎದ್ದ ತಕ್ಷಣ ಗಂಟಲು ಒಣಗಿದಂತೆ ಅನಿಸಿದರೆ ಅದನ್ನು ನಿರ್ಲಕ್ಷಿಸಬಾರದು. ಏಕೆಂದರೆ ಇದು ಅನಾರೋಗ್ಯದ ಸಂಕೇತವಾಗಿದೆ. ಇದು ಮಧುಮೇಹದ ಸಾಮಾನ್ಯ ಲಕ್ಷಣ. ಒಣ ಗಂಟಲು ಡಿಹೈಡ್ರೇಶನ್ ಸಂಕೇತವೂ ಹೌದು. ದೇಹದಲ್ಲಿ ನೀರಿನ ಕೊರತೆಯಿಂದಲೂ ಗಂಟಲು ಒಣಗುತ್ತದೆ.
ವಿಪರೀತ ಸುಸ್ತು – ರಾತ್ರಿ ಸೊಗಸಾದ ನಿದ್ದೆಯ ಬಳಿಕವೂ ಬೆಳಗ್ಗೆ ಎದ್ದ ಬಳಿಕ ನಿಮಗೆ ಸುಸ್ತು ಎನಿಸಿದರೆ ಅದನ್ನು ನಿರ್ಲಕ್ಷಿಸಬೇಡಿ. ವಿಪರೀತ ಆಯಾಸವಾಗುತ್ತಿದ್ದರೆ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ.
ವಾಂತಿ ಮತ್ತು ವಾಕರಿಕೆ – ಬೆಳಗ್ಗೆ ಎದ್ದ ನಂತರ ಕೆಲವರಿಗೆ ವಾಂತಿ ಬಂದಂತಾಗುವುದ, ವಾಕರಿಗೆ ಇಂತಹ ಸಮಸ್ಯೆಗಳಾಗುತ್ತವೆ. ಬೆಳಗ್ಗೆ ಎದ್ದ ತಕ್ಷಣ ವಾಂತಿ ಮಾಡುವುದು ಅನಾರೋಗ್ಯದ ಲಕ್ಷಣವಾಗಿರಬಹುದು. ಏಕೆಂದರೆ ಮುಂಜಾನೆ ವಾಂತಿ ಅಥವಾ ವಾಕರಿಕೆ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಯಾಗಿರುತ್ತದೆ. ದೀರ್ಘಕಾಲದವರೆಗೆ ಅಂತಹ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಅದನ್ನು ನಿರ್ಲಕ್ಷಿಸಬಾರದು.