ಪ್ರತಿದಿನ ಬೆಳಗ್ಗೆ ವಾಕ್ ಮಾಡುವುದು ಉತ್ತಮ ಅಭ್ಯಾಸ. ಆದರೆ ಬೆಳಗಿನ ನಡಿಗೆಯ ಸಮಯದಲ್ಲಿ ಮೊಬೈಲ್ ಫೋನ್ ಬಳಸುವುದರಿಂದ ಸಾಕಷ್ಟು ದುಷ್ಪರಿಣಾಮಗಳುಂಟಾಗುತ್ತವೆ. ಮೊಬೈಲ್ ಫೋನ್ ನಮ್ಮ ದೈನಂದಿನ ಜೀವನದ ಪ್ರಮುಖ ಭಾಗವಾಗಿದೆ. ಮೊಬೈಲ್ ಇಲ್ಲದ ಜೀವನವನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ.
ಆದರೆ ಕೆಲವೊಮ್ಮೆ ಮೊಬೈಲ್ ಬಳಕೆ ವಿಪರೀತವಾದಾಗ ಕೆಟ್ಟ ಚಟವೆಂದೇ ಪರಿಗಣಿಸಲಾಗುತ್ತದೆ. ಬೆಳಗ್ಗೆ ವಾಕಿಂಗ್ ಸಮಯದಲ್ಲೂ ಕೆಲವರು ಫೋನ್ ಬಳಸುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಆದರೆ ಈ ರೀತಿ ಮಾಡುವುದು ಅಪಾಯಕಾರಿ. ಬೆಳಗಿನ ನಡಿಗೆಯಲ್ಲಿ ಮೊಬೈಲ್ ಏಕೆ ಬಳಸಬಾರದು ಎಂಬುದನ್ನು ತಿಳಿಯೋಣ.
1. ದೇಹದ ಭಂಗಿಯು ಕೆಟ್ಟದಾಗಿರುತ್ತದೆ
ವಾಕಿಂಗ್ ಸಂದರ್ಭದಲ್ಲಿ ನಡುವನ್ನು ನೆಟ್ಟಗೆ ಇಟ್ಟುಕೊಂಡು ನಡಿಗೆಯತ್ತ ಗಮನ ಹರಿಸಬೇಕು. ಆದರೆ ಆ ಸಮಯದಲ್ಲಿ ನಾವು ಮೊಬೈಲ್ ಬಳಸಿದರೆ, ನಮಗೆ ಅರಿವಿಲ್ಲದೆಯೇ ಸ್ವಲ್ಪ ಬಗ್ಗುತ್ತೇವೆ. ಇದು ಬೆನ್ನುಹುರಿಯ ಮೇಲೆ ಪರಿಣಾಮ ಬೀರಿ ದೇಹದ ಭಂಗಿಯನ್ನೂ ಕೆಡಿಸುತ್ತದೆ.
2. ಬೆನ್ನು ನೋವು ಬರಬಹುದು
ಮಾರ್ನಿಂಗ್ ವಾಕ್ ಸಮಯದಲ್ಲಿ, ನಾವು ಮತ್ತೆ ಮತ್ತೆ ಮೊಬೈಲ್ ಫೋನ್ ನೋಟಿಫಿಕೇಶನ್‌ಗಳನ್ನು ನೋಡುತ್ತಿದ್ದರೆ, ನಮ್ಮ ದೇಹದ ಭಂಗಿಯು ಕೆಡುತ್ತದೆ. ನಂತರ ಅದು ಬೆನ್ನುನೋವಿಗೆ ಕಾರಣವಾಗಬಹುದು. ಆದ್ದರಿಂದ ಸೆಲ್‌ಫೋನ್ ಅನ್ನು ಜೇಬಿನಲ್ಲಿ ಇಟ್ಟುಕೊಂಡು ನಡೆಯುವುದು ಉತ್ತಮ.
3. ಸ್ನಾಯುಗಳಲ್ಲಿ ನೋವು ಬರಬಹುದು
ನಾವು ವಾಕಿಂಗ್ ಮಾಡುವಾಗ ಎರಡೂ ಕೈಗಳನ್ನು ಮೇಲಕ್ಕೆ ಮತ್ತು ಕೆಳಕ್ಕೆ ಚಲಿಸಬೇಕು. ಹೀಗೆ ಮಾಡುವುದರಿಂದ ನಮ್ಮ ಕೈಗಳ ಸ್ನಾಯುಗಳಿಗೆ ವ್ಯಾಯಾಮವಾಗುತ್ತದೆ. ಆದರೆ ನಾವು ಒಂದು ಕೈಯಿಂದ ಮೊಬೈಲ್ ಬಳಸುತ್ತ, ಇನ್ನೊಂದು ಕೈಯನ್ನು ಮೇಲಕ್ಕೆ ಮತ್ತು ಕೆಳಕ್ಕೆ ಚಲಿಸಿದಾಗ, ಸ್ನಾಯುಗಳ ಸಮತೋಲನವು ಹದಗೆಡುತ್ತದೆ. ನಂತರ ಅದು ಸ್ನಾಯು ನೋವಿಗೂ ಕಾರಣವಾಗಬಹುದು.
4. ಏಕಾಗ್ರತೆಗೆ ಭಂಗ
ಮಾರ್ನಿಂಗ್ ವಾಕ್ ಮಾಡುವಾಗ, ನಮ್ಮ ಸಂಪೂರ್ಣ ಗಮನವು ಅದರ ಮೇಲೆಯೇ ಇರಬೇಕು. ಆದರೆ ವಾಕಿಂಗ್ ಸಂದರ್ಭದಲ್ಲಿ ಮೊಬೈಲ್ ಫೋನ್ ಬಳಸಿದರೆ ನಮ್ಮ ಗಮನವು ವಿಚಲಿತಗೊಳ್ಳುತ್ತದೆ ಮತ್ತು ಏಕಾಗ್ರತೆ ಕ್ಷೀಣಿಸುತ್ತದೆ. ಯಾವುದೇ ವ್ಯಾಯಾಮದ ಸಂಪೂರ್ಣ ಪ್ರಯೋಜನ ಸಿಗಬೇಕೆಂದರೆ ಅದನ್ನು ಸರಿಯಾಗಿ ಮಾಡಬೇಕು. ಹಾಗಾಗಿ ವಾಕಿಂಗ್ ಮಾಡುವಾಗ ಫೋನ್ ಬಳಸದೇ ಇರುವುದು ಉತ್ತಮ.