ಪ್ರತಿದಿನ ಒಂದೇ ರೀತಿಯ ಉಪಹಾರ ಸೇವಿಸೋದು ಒಮ್ಮೊಮ್ಮೆ ಬೋರಿಂಗ್ ಎನಿಸಿಬಿಡುತ್ತೆ. ಸ್ಪೆಷಲ್ಲಾಗಿ ಏನಾದ್ರು ತಿನ್ನೋಣ ಅನ್ನೋ ಕ್ರೇವಿಂಗ್ ಶುರುವಾಗುತ್ತೆ. ಆಗ ನೀವು ವಿಶಿಷ್ಟವಾದ ಅವಲಕ್ಕಿ ಪಕೋಡಾ ಮಾಡಬಹುದು. ವಿಭಿನ್ನ ರುಚಿ ಹೊಂದಿರೋ ಸುಲಭದ ರೆಸಿಪಿ ಇದು.
ಅವಲಕ್ಕಿ ಪಕೋಡಾ ಮಾಡಲು ಬೇಕಾಗುವ ಸಾಮಾಗ್ರಿಗಳು: ಒಂದೂವರೆ ಕಪ್ ಅವಲಕ್ಕಿ, ಬೇಯಿಸಿದ ಆಲೂಗಡ್ಡೆ 3, ಹಸಿರು ಮೆಣಸಿನಕಾಯಿ 2, 2 ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು, ಅರ್ಧ ಚಮಚ ಕೆಂಪು ಮೆಣಸಿನಕಾಯಿ ಪುಡಿ, ಅರ್ಧ ಚಮಚ ಜೀರಿಗೆ, ಅರ್ಧ ಚಮಚ ಸಕ್ಕರೆ, ಒಂದು ಚಮಚ ನಿಂಬೆ ರಸ, ಒಂದು ಚಮಚ ಎಣ್ಣೆ ಮತ್ತು ಉಪ್ಪು.
ಪಕೋಡಾ ಮಾಡುವ ವಿಧಾನ: ಮೊದಲು ಅವಲಕ್ಕಿಯನ್ನು ನೀರಿನಲ್ಲಿ ತೊಳೆದು, ಸ್ಟ್ರೈನರ್ನಲ್ಲಿ ಹಾಕಿ ಜಾಲಿಸಿಕೊಳ್ಳಿ. ಸ್ವಲ್ಪ ಹೊತ್ತು ಹಾಗೇ ನೆನೆಸಿಡಿ. ಆಲೂಗಡ್ಡೆಯನ್ನು ಬೇಯಿಸಿ ಸಿಪ್ಪೆ ಸುಲಿದು ಚೆನ್ನಾಗಿ ಮ್ಯಾಶ್ ಮಾಡಿಕೊಳ್ಳಿ. ಅದಕ್ಕೆ ಹೆಚ್ಚಿದ ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪನ್ನು ಹಾಕಿ. ನೆನೆಸಿದ ಅವಲಕ್ಕಿಯನ್ನೂ ಹಾಕಿಕೊಳ್ಳಿ. ಕೆಂಪು ಮೆಣಸಿನ ಪುಡಿ, ಜೀರಿಗೆ, ಸಕ್ಕರೆ, ಉಪ್ಪು ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಬಾಣಲೆಯಲ್ಲಿ ಕರಿಯಲು ಎಣ್ಣೆ ಬಿಸಿ ಮಾಡಿಕೊಳ್ಳಿ. ಎಣ್ಣೆ ಬಿಸಿಯಾದಾಗ ಮಿಶ್ರಣವನ್ನು ಪಕೋಡಾದ ಆಕಾರದಲ್ಲಿ ಕರಿಯಿರಿ. ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೂ ಕರಿದರೆ ಗರಿಗರಿ ಪಕೋಡಾ ಸಿದ್ಧವಾಗುತ್ತದೆ. ಬಿಸಿಬಿಸಿಯಾಗಿಯೇ ಅದನ್ನು ಪುದೀನಾ ಚಟ್ನಿ ಜೊತೆಗೆ ಸರ್ವ್ ಮಾಡಿ.