ನಾವು ಆರೋಗ್ಯವಾಗಿರಬೇಕೆಂದ್ರೆ ಆಹಾರದ ಬಗ್ಗೆ ಗಮನ ಕೊಡಬೇಕು. ದಿನದ ಎಲ್ಲಾ ಊಟ-ಉಪಹಾರಗಳ ಪೈಕಿ ಬೆಳಗಿನ ಬ್ರೇಕ್‌ಫಾಸ್ಟ್ ಅತ್ಯಂತ ಪ್ರಮುಖವೆಂದು ಪರಿಗಣಿಸಲಾಗಿದೆ. ಇದು ದಿನದ ಮೊದಲ ಆಹಾರವಾಗಿರೋದ್ರಿಂದ ಏನನ್ನು ತಿನ್ನಬೇಕು, ಏನನ್ನು ತಿನ್ನಬಾರದು ಅನ್ನೋ ಬಗ್ಗೆ ಕಾಳಜಿ ವಹಿಸಬೇಕು.
ಜನರು ಬೆಳಗ್ಗೆ ಅವಸರದಲ್ಲಿ ಪ್ಯಾಕ್ಡ್ ಹಣ್ಣಿನ ರಸವನ್ನು ಕುಡಿಯುತ್ತಾರೆ. ಇದು ಆರೋಗ್ಯಕ್ಕೆ ಅತ್ಯಂತ ಹಾನಿಕರ. ಬೆಳಗಿನ ಉಪಹಾರದಲ್ಲಿ ತಾಜಾ ಹಣ್ಣಿನ ರಸವನ್ನು ಸೇವಿಸಬಹುದು ಆದರೆ ಸಕ್ಕರೆ ಮತ್ತು ಪ್ರಿಸರ್ವೇಟಿವ್ಸ್ ಬೆರೆಸಿರುವ ಜ್ಯೂಸ್ ಒಳ್ಳೆಯದಲ್ಲ. ಬೆಳಗಿನ ತಿಂಡಿಗೆ ಕೇವಲ ಹಣ್ಣಿನ ರಸವನ್ನು ಮಾತ್ರ ಕುಡಿದರೆ ಸ್ವಲ್ಪ ಸಮಯದ ನಂತರ ಆಹಾರಕ್ಕಾಗಿ ಕಡುಬಯಕೆ ಪ್ರಾರಂಭವಾಗುತ್ತದೆ. ಆಗ ಜಂಕ್‌ಫುಡ್‌ಗಳನ್ನು ಸೇವನೆ ಮಾಡುವ ಅಪಾಯವಿರುತ್ತದೆ.
ಬೆಳಗಿನ ಉಪಾಹಾರಕ್ಕೆ ಬಟರ್ ಟೋಸ್ಟ್ ತಿನ್ನುವುದು ತುಂಬಾ ಸಾಮಾನ್ಯ. ಆದರೆ ವಾಸ್ತವದಲ್ಲಿ ಇದು ನಿಮ್ಮ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಲ್ಲ. ಬೆಣ್ಣೆಯಲ್ಲಿ ಕೊಬ್ಬಿನ ಅಂಶವು ತುಂಬಾ ಹೆಚ್ಚಾಗಿರುತ್ತದೆ. ಬ್ರೆಡ್ ಅನ್ನು ಕೂಡ ಮೈದಾದಿಂದ ತಯಾರಿಸಲಾಗುತ್ತದೆ. ಹಾಗಾಗಿ ಬಟರ್ ಟೋಸ್ಟ್ ತಿನ್ನುವುದರಿಂದ ತೂಕ ಹೆಚ್ಚಾಗಬಹುದು.
ದಿನದ ಆರಂಭದಲ್ಲಿ ಸಕ್ಕರೆ ಬೆರೆತ ಆಹಾರ ಪದಾರ್ಥಗಳು ಅಥವಾ ಹೆಚ್ಚಿನ ಸಂಸ್ಕರಿಸಿದ ತಿನಿಸುಗಳನ್ನು ಸಂಪೂರ್ಣವಾಗಿ ತ್ಯಜಿಸಬೇಕು. ಅನೇಕ ಜನರು ಬೆಳಗಿನ ಉಪಾಹಾರದಲ್ಲಿ ಕಾಫಿ ಕುಡಿಯುವ ಅಭ್ಯಾಸವನ್ನು ಹೊಂದಿದ್ದಾರೆ, ಆದರೆ ಕಾಫಿ ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಆದ್ದರಿಂದ ಉಪಹಾರದಲ್ಲಿ ಅದನ್ನು ಸೇವಿಸುವುದನ್ನು ತಪ್ಪಿಸಿ. ಬೆಳಗಿನ ಉಪಾಹಾರದ ಜೊತೆಗೆ ಅಪ್ಪಿತಪ್ಪಿಯೂ ಆಲ್ಕೋಹಾಲ್ ಸೇವಿಸಬಾರದು. ಅನೇಕರು ಬೆಳಗ್ಗೆ ಬಿಯರ್ ಕುಡಿಯುವ ಅಭ್ಯಾಸವನ್ನು ಹೊಂದಿದ್ದಾರೆ. ಹೀಗೆ ಮಾಡುವುದರಿಂದ ಆರೋಗ್ಯ ಹದಗೆಡುತ್ತದೆ.