ಬೆಳಗಿನ ಉಪಾಹಾರ ಸೇವನೆಗೆ ಸರಿಯಾದ ಸಮಯವನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಆ ಸಮಯದಲ್ಲಿ ನಾವು ಉಪಾಹಾರ ಸೇವಿಸದಿದ್ದರೆ ದೇಹದ ಮೇಲೆ ನಕಾರಾತ್ಮಕ ಪರಿಣಾಮಗಳು ಉಂಟಾಗಬಹುದು. ಸಮಯಕ್ಕೆ ಸರಿಯಾಗಿ ಬೆಳಗಿನ ಉಪಾಹಾರ ತಿನ್ನದೇ ಇದ್ದರೆ ದೇಹದ ಶಕ್ತಿಯ ಮಟ್ಟ ಕಡಿಮೆಯಾಗುತ್ತದೆ. ದಿನವಿಡೀ ದಣಿವು ಮತ್ತು ದುರ್ಬಲತೆಯನ್ನು ಅನುಭವಿಸಬೇಕಾಗಬಹುದು. ಇದು ಮಾನಸಿಕ ಒತ್ತಡ ಮತ್ತು ಆತಂಕವನ್ನು ಹೆಚ್ಚಿಸಬಹುದು.
ಬೆಳಗಿನ ಉಪಹಾರವನ್ನು ತ್ಯಜಿಸಿದರೆ ಅದು ನಮ್ಮ ರೋಗನಿರೋಧಕ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ರಕ್ತದೊತ್ತಡ ಮತ್ತು ಮಧುಮೇಹದ ಅಪಾಯವು ಹೆಚ್ಚಾಗುತ್ತದೆ.ಅದಕ್ಕಾಗಿಯೇ ಸರಿಯಾದ ಸಮಯದಲ್ಲಿ ಬೆಳಗಿನ ಉಪಾಹಾರ ಸೇವನೆ ಆರೋಗ್ಯ ಮತ್ತು ಸಮತೋಲಿತ ಜೀವನಶೈಲಿಗೆ ಬಹಳ ಮುಖ್ಯವಾಗಿದೆ. ಸೂಕ್ತ ಸಮಯದಲ್ಲಿ ಉಪಹಾರ ಸೇವಿಸದೇ ಇರುವುದು ಹಸಿವನ್ನು ಹೆಚ್ಚಿಸಬಹುದು. ಇದರಿಂದ ಒಮ್ಮೆಲೇ ಅತಿಯಾಗಿ ತಿನ್ನುವ ಸಾಧ್ಯತೆ ಇರುತ್ತದೆ. ಇದರ ಪರಿಣಾಮ ದೇಹದ ತೂಕ ಹೆಚ್ಚಾಗಬಹುದು.
ಬೆಳಗಿನ ಉಪಾಹಾರಕ್ಕೆ ಸರಿಯಾದ ಸಮಯ!
ಬೆಳಗ್ಗೆ 7 ರಿಂದ 8 ಗಂಟೆಯ ಒಳಗೆ ಉಪಹಾರವನ್ನು ಸೇವಿಸಬೇಕು. ಇದು ಸೂಕ್ತವಾದ ಸಮಯ. ಈ ಅವಧಿಯಲ್ಲಿ ನಿಮಗೆ ಉಪಹಾರವನ್ನು ಮಾಡಲು ಸಾಧ್ಯವಾಗದಿದ್ದರೆ 10 ಗಂಟೆಗೂ ಮೊದಲು ತಿನ್ನಬೇಕು. ವಿಜ್ಞಾನಿಗಳ ಪ್ರಕಾರ ನಿದ್ದೆಯಿಂದ ಎದ್ದು ಒಂದು ಗಂಟೆಯೊಳಗೆ ಉಪಹಾರವನ್ನು ಸೇವಿಸಬೇಕು. ರಾತ್ರಿಯಿಡೀ ನಾವು ಉಪವಾಸ ಇರುವುದರಿಂದ ನಮ್ಮ ದೇಹಕ್ಕೆ ಶಕ್ತಿಯ ಅಗತ್ಯವಿರುತ್ತದೆ, ಬೆಳಗ್ಗೆ ಗ್ಲೂಕೋಸ್ ಮಟ್ಟವು ಸಾಮಾನ್ಯವಾಗಿ ಕಡಿಮೆಯಾಗುತ್ತದೆ. ಬೆಳಗಿನ ಉಪಾಹಾರವು ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸಕ್ರಿಯಗೊಳಿಸುತ್ತದೆ ಮತ್ತು ದಿನವನ್ನು ಪ್ರಾರಂಭಿಸಲು ನಮಗೆ ಶಕ್ತಿಯನ್ನು ನೀಡುತ್ತದೆ.
ಆರೋಗ್ಯಕರ ಉಪಹಾರದ ಆಯ್ಕೆ…
ಬೆಳಗಿನ ಉಪಾಹಾರದಲ್ಲಿ ಹಣ್ಣು, ತರಕಾರಿಗಳು ಮತ್ತು ಸಿರಿಧಾನ್ಯಗಳನ್ನು ಸೇವಿಸುವುದರಿಂದ ದೇಹಕ್ಕೆ ನಾರಿನಂಶವು ದೊರೆಯುತ್ತದೆ. ಇದು ಜೀರ್ಣಕ್ರಿಯೆಗೆ ಒಳ್ಳೆಯದು. ಓಟ್ ಮೀಲ್, ಹಣ್ಣು ಮತ್ತು ತರಕಾರಿಯ ಸ್ಮೂಥಿ, ಮೊಟ್ಟೆ ಮತ್ತು ಟೋಸ್ಟ್ ಅನ್ನು ಸಹ ಸೇವನೆ ಮಾಡಬಹುದು. ಬೆಳಗಿನ ಉಪಹಾರ ಹಸಿವನ್ನು ನಿಯಂತ್ರಿಸುವುದರ ಜೊತೆಗೆ ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ ಮತ್ತು ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.