
ವೈಟ್ ಬ್ರೆಡ್ ಅನ್ನು ಸಾಮಾನ್ಯವಾಗಿ ಎಲ್ಲರೂ ಇಷ್ಟಪಡ್ತಾರೆ. ಎಷ್ಟೋ ಮನೆಗಳಲ್ಲಿ ಬೆಳಗಿನ ತಿಂಡಿಗೆ ಬಿಳಿ ಬ್ರೆಡ್ ಸೇವನೆ ಮಾಡಲಾಗುತ್ತದೆ. ಉಪಾಹಾರಕ್ಕೆ ಅದನ್ನು ಸ್ಯಾಂಡ್ವಿಚ್ ರೂಪದಲ್ಲಿ ಅಥವಾ ಟೋಸ್ಟ್ ಮಾಡಿಕೊಂಡು ತಿನ್ನಲಾಗುತ್ತದೆ. ಯಾಕಂದ್ರೆ ಅವುಗಳನ್ನು ತಯಾರಿಸುವುದು ಸುಲಭ, ಹೆಚ್ಚಿನ ಸಮಯವೂ ಅಗತ್ಯವಿಲ್ಲ.
ಬೆಳಗ್ಗೆ ಕಚೇರಿಗೆ ಅಥವಾ ಶಾಲೆಗೆ ಹೋಗುವಾಗ ತರಾತುರಿಯಲ್ಲಿ ಬ್ರೆಡ್ ತಿನ್ನುವುದು ಸರಳವೆನಿಸುತ್ತದೆ. ಆದ್ರೆ ಈ ವೈಟ್ ಬ್ರೆಡ್ ನಮಗೆ ಮಾರಕವಾಗಬಹುದು. ಇದರಿಂದ ಉಂಟಾಗುವ ಹಾನಿಯ ಬಗ್ಗೆ ಬಹುತೇಕರಿಗೆ ತಿಳಿದಿಲ್ಲ.
ಹೆಚ್ಚಿನ ಪ್ರಮಾಣದ ಉಪ್ಪು
ವೈಟ್ ಬ್ರೆಡ್‌ಗಳಲ್ಲಿ ಉಪ್ಪಿನಂಶ ಮತ್ತು ಸಂರಕ್ಷಕಗಳು ತುಂಬಾ ಹೆಚ್ಚಿರುತ್ತವೆ. ಏಕೆಂದರೆ ಅವುಗಳನ್ನು ವಾರಗಟ್ಟಲೆ ಇಟ್ಟು ಮಾರುತ್ತಾರೆ. ಹಾಗಾಗಿಯೇ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ವೈಟ್ ಬ್ರೆಡ್ ತಿನ್ನುವುದರಿಂದ ರಕ್ತದೊತ್ತಡ ಹೆಚ್ಚಾಗಬಹುದು.
ತೂಕವನ್ನು ಹೆಚ್ಚಿಸಬಹುದು
ವೈಟ್ ಬ್ರೆಡ್‌ನಲ್ಲಿ ಹೆಚ್ಚಿನ ಪ್ರಮಾಣದ ಕಾರ್ಬೋಹೈಡ್ರೇಟ್‌ಗಳು, ಸಂಸ್ಕರಿಸಿದ ಸಕ್ಕರೆ ಮತ್ತು ಉಪ್ಪು ಇರುತ್ತದೆ. ಇದು ನಮ್ಮ ದೇಹಕ್ಕೆ ಹೆಚ್ಚಿನ ಹಾನಿ ಉಂಟುಮಾಡುತ್ತದೆ. ಇದನ್ನು ನಿಯಮಿತವಾಗಿ ಸೇವಿಸಿದರೆ ರಕ್ತದಲ್ಲಿನ ಸಕ್ಕರೆಯ ಮಟ್ಟ ಮತ್ತು ಕೊಬ್ಬು ವೇಗವಾಗಿ ಹೆಚ್ಚಾಗುತ್ತದೆ. ಇದು ಮಧುಮೇಹ ಮತ್ತು ಬೊಜ್ಜಿನ ಅಪಾಯಕ್ಕೆ ಕಾರಣವಾಗುತ್ತದೆ.
ಹೃದಯದ ಆರೋಗ್ಯ ಸಮಸ್ಯೆ
ಬ್ರೆಡ್‌ನಲ್ಲಿ ಹೆಚ್ಚಿನ ಪ್ರಮಾಣದ ಸೋಡಿಯಂ ಇರುವುದರಿಂದ, ಬಿಪಿ ಹೆಚ್ಚಾಗುವ ಅಪಾಯವಿದೆ. ಅಧಿಕ ರಕ್ತದೊತ್ತಡ ಎಂದರೆ ರಕ್ತವು ಹೃದಯವನ್ನು ತಲುಪಲು ಅಪಧಮನಿಗಳ ಮೂಲಕ ಒತ್ತಡ ಅನುಭವಿಸುತ್ತದೆ. ಇದು ಪರಿಧಮನಿಯ ಕಾಯಿಲೆ, ಟ್ರಿಪಲ್ ನಾಳೀಯ ಕಾಯಿಲೆ ಮತ್ತು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ. ಹಾಗಾಗಿ ವೈಟ್ ಬ್ರೆಡ್ ಬದಲು ಧಾನ್ಯ ಅಥವಾ ಬಹು ಧಾನ್ಯದ ರೊಟ್ಟಿ ತಿನ್ನುವುದು ಸೂಕ್ತ ಎನ್ನುತ್ತಾರೆ ಆರೋಗ್ಯ ತಜ್ಞರು.