ಆರೋಗ್ಯವಾಗಿರಲು ಮೊದಲ ನಿಯಮವೆಂದರೆ ನಿಮ್ಮ ಆಹಾರ ಕ್ರಮದ ಬಗ್ಗೆ ಗಮನ ಕೊಡುವುದು. ನೀವು ಏನು ತಿನ್ನುತ್ತಿದ್ದೀರಿ? ಯಾವಾಗ ತಿನ್ನುತ್ತಿದ್ದೀರಿ? ಎನ್ನುವುದು ಬಹಳ ಮುಖ್ಯ. ಕೆಲವೊಮ್ಮೆ ನೀವು ಸೇವಿಸುವ ಆಹಾರ ಸರಿಯಾಗಿದ್ದರೂ ಅದನ್ನು ಸೇವಿಸುವ ಸಮಯ ಸರಿಯಾಗಿರುವುದಿಲ್ಲ. ದಿನದ ಊಟ, ತಿಂಡಿಗಳಲ್ಲಿ ಬೆಳಗಿನ ಉಪಹಾರಕ್ಕೆ ಬಹಳ ಪ್ರಾಮುಖ್ಯತೆ ಇದೆ.
ನಿಮ್ಮ ದಿನ ಆರಂಭವಾಗುವುದೇ ಉಪಹಾರದಿಂದ. ಹಾಗಾಗಿ ನೀವು ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಬೆಳಗಿನ ಉಪಾಹಾರದಲ್ಲಿ ನೀವು ಯಾವ ಪದಾರ್ಥಗಳನ್ನು ಸೇವಿಸಬಾರದು ಎಂಬುದನ್ನು ತಿಳಿದುಕೊಳ್ಳಿ.
ಹಣ್ಣಿನ ರಸ : ಬೆಳಗ್ಗೆ ಕಚೇರಿಗೆ ಹೋಗುವ ಅವಸರದಲ್ಲಿ ಪ್ಯಾಕ್ ಮಾಡಿದ ಹಣ್ಣಿನ ಜ್ಯೂಸ್ ಕುಡಿದು ಬಿಡುತ್ತಾರೆ. ಇದರಿಂದ ಆರೋಗ್ಯ ಹದಗೆಡುವುದರಲ್ಲಿ ಅನುಮಾನವೇ ಇಲ್ಲ. ಏಕೆಂದರೆ ಬೆಳಗಿನ ಉಪಾಹಾರ ಯಾವಾಗಲೂ ನಿಮ್ಮ ಹೊಟ್ಟೆ ತುಂಬುವಂತಿರಬೇಕು. ಪೋಷಕಾಂಶಗಳಿಂದ ತುಂಬಿರಬೇಕು. ನೀವು ಒಂದು ಗ್ಲಾಸ್ ಜ್ಯೂಸ್ ಕುಡಿದು ಹೊರಟರೆ ಸ್ವಲ್ಪ ಸಮಯದ ನಂತರ ಏನನ್ನಾದರೂ ತಿನ್ನಲು ಹಂಬಲಿಸುತ್ತೀರಿ. ಆಗ ಜಂಕ್ ಫುಡ್ ತಿನ್ನುವ ಸಾಧ್ಯತೆ ಇರುತ್ತದೆ. ಹಾಗಾಗಿ ಬೆಳಗ್ಗೆ ಉಪಹಾರ ಹೊಟ್ಟೆ ಭರ್ತಿಯಾಗುವಂತಿರಲಿ.
ಬೆಣ್ಣೆ ಸವರಿದ ಟೋಸ್ಟ್: ಬೆಳಗಿನ ಉಪಾಹಾರದಲ್ಲಿ ಬಟರ್ ಟೋಸ್ಟ್ ತಿನ್ನುವುದು ಸಾಮಾನ್ಯವಾಗಿದೆ. ಆದರೆ ವಾಸ್ತವದಲ್ಲಿ ಇದು ನಿಮ್ಮ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಲ್ಲ. ಮಾರುಕಟ್ಟೆಯಲ್ಲಿ ಸಿಗುವ ಬೆಣ್ಣೆಯಲ್ಲಿ ಕೊಬ್ಬಿನ ಅಂಶವು ತುಂಬಾ ಹೆಚ್ಚಿರುತ್ತದೆ. ಬ್ರೆಡ್ ಅನ್ನು ಮೈದಾದಿಂದ ತಯಾರಿಸಲಾಗುತ್ತದೆ. ಹಾಗಾಗಿ ಬೆಣ್ಣೆ ಸವರಿದ ಬ್ರೆಡ್ ತಿಂದರೆ ನಿಮ್ಮ ತೂಕ ಹೆಚ್ಚಾಗಬಹುದು.
ಸಕ್ಕರೆ ಮಿಶ್ರಿತ ತಿನಿಸು: ದಿನದ ಆರಂಭದಲ್ಲೇ ನೀವು ಸಕ್ಕರೆ ಬೆರೆಸಿದ ತಿನಿಸುಗಳನ್ನುಸ ಸೇವನೆ ಮಾಡಬಾರದು. ಬೆಳಗಿನ ಉಪಾಹಾರದಲ್ಲಿ ಹೆಚ್ಚು ಸಕ್ಕರೆಯನ್ನು ಸೇವಿಸಿದಾಗ, ತೂಕ ಹೆಚ್ಚಾಗುವ ಸಾಧ್ಯತೆಗಳು ಇರುತ್ತವೆ. ಹಾಗಾಗಿ ಬ್ರೇಕ್‌ಫಾಸ್ಟ್‌ಗೆ ಸಕ್ಕರೆಯನ್ನು ದೂರವಿಡಿ.