ಆಹಾರ ಸಚಿವ ಉಮೇಶ್ ಕತ್ತಿ ಅವರ ಅಕಾಲಿಕ ನಿಧನದ ದುಃಖ ಎಲ್ಲೆಡೆ ಮಡುಗಟ್ಟಿದೆ. ಬೆಳಗಾವಿ ಜಿಲ್ಲೆಯ ಪ್ರಭಾವಿ ನಾಯಕರಾಗಿದ್ದ ಅವರ ಅಂತ್ಯಕ್ರಿಯೆ ಇಂದು ಸಂಜೆ ಹುಕ್ಕೇರಿ ತಾಲೂಕಿನ ಸ್ವಗ್ರಾಮ ಬೆಲ್ಲದ ಬಾಗೇವಾಡಿಯಲ್ಲಿ ನಡೆಯಲಿದೆ.
ಉತ್ತರ ಕರ್ನಾಟಕ ಸಮಗ್ರ ಅಭಿವೃದ್ಧಿಯ ಕನಸು ಹೊತ್ತಿದ್ದ ಅವರು, ಪ್ರತ್ಯೇಕ ರಾಜ್ಯದ ಮಾತುಗಳನ್ನು ಸಹ ಆಡಿದ್ದರು. ಅಲ್ಲದೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾದರೆ ನಾನು ಮುಖ್ಯಮಂತ್ರಿಯಾಗುತ್ತೇನೆ ಎಂದು ಸಹ ಹೇಳಿಕೊಂಡಿದ್ದರು.
ಸ್ವಾರಸ್ಯಕರ ಸಂಗತಿ ಎಂದರೆ ಬೆಳಗಾವಿಯಲ್ಲಿ ಸುವರ್ಣ ಸೌಧ ಉದ್ಘಾಟನೆಯಾದ ವೇಳೆ ಇದು ನಮಗಾಗಿ ಎಂದು ಅವರು ಹೇಳಿದ್ದರು. ಅಂದರೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾದಾಗ ಬೆಳಗಾವಿ ರಾಜಧಾನಿಯಾಗುತ್ತದೆ. ಸುವರ್ಣಸೌಧವೇ ಶಕ್ತಿ ಕೇಂದ್ರವಾಗುತ್ತದೆ. ಹೀಗಾಗಿ ನಾನು ಮುಖ್ಯಮಂತ್ರಿಯಾದರೆ ಇದು ನಮಗೆ ಉಪಯೋಗವಾಗುತ್ತದೆ ಎಂಬುದು ಅವರ ಮಾತಿನ ಅರ್ಥವಾಗಿತ್ತು.