ಹುಬ್ಬಳ್ಳಿ: ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಈ ಬಾರಿಯ ಚಳಿಗಾಲದ ಅಧಿವೇಶನ ನಡೆಸಲಾಗುವುದು ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಸುವರ್ಣ ವಿಧಾನಸೌಧದಲ್ಲೇ ಚಳಿಗಾಲದ ಅಧಿವೇಶನ ನಡೆಯಲಿದೆ. ಈ ಬಗ್ಗೆ ಸಿಎಂ ಬೊಮ್ಮಾಯಿ ಹಾಗೂ ಸ್ಪೀಕರ್ ಕಾಗೇರಿ ಜೊತೆ ಚರ್ಚೆ ನಡೆಸಿದ್ದೇನೆ ಎಂದರು.
ಡಿಸೆಂಬರ್ 2ನೇ ವಾರದಲ್ಲಿ ಅಧಿವೇಶನ ಆರಂಭವಾಗುವ ಸಾಧ್ಯತೆ ಇದೆ. 2 ವಾರಗಳ ಕಾಲ ಅಧಿವೇಶನ ಬೆಳಗಾವಿಯಲ್ಲೇ ನಡೆಯಲಿದೆ. ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚಿಸುವ ನಿಟ್ಟಿನಲ್ಲಿ ಬೆಳಗಾವಿ ಅಧಿವೇಶನ ಹೆಚ್ಚು ಕೇಂದ್ರೀಕೃತವಾಗಲಿದೆ. ಸುಗಮ ಕಲಾಪಕ್ಕೆ ಅನುವು ಮಾಡಿಕೊಡುವಂತೆ ವಿಪಕ್ಷಗಳ ನಾಯಕರ ಜೊತೆಯೂ ಚರ್ಚೆ ನಡೆಸುತ್ತಿದ್ದೇವೆ ಎಂದು ಹೇಳಿದರು.