ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ನಮಗಿಂತ ಹೆಚ್ಚಾಗಿ ಸಂಪನ್ಮೂಲಗಳೂ ಬಿಜೆಪಿಯವರಿಗಿದೆ. ಅಧಿಕಾರ ದುರ್ಬಳಕೆ ಮಾಡಿಕೊಂಡು ಪಾಲಿಕೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ ಎಂಬ ಮಾತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಚುನಾವಣೆಯಲ್ಲಿ ನಮ್ಮ ನಿರೀಕ್ಷೆಗೆ ತಕ್ಕಂತೆ ಫಲಿತಾಂಶ ಬಂದಿಲ್ಲ. ಬೆಳಗಾವಿ ಪಾಲಿಕೆಯಲ್ಲಿ ಅನಿರೀಕ್ಷಿತ ಫಲಿತಾಂಶ ಬಂದಿದೆ. ಬೆಳಗಾವಿಯಲ್ಲಿ ಬಿಜೆಪಿ ಗೆಲ್ಲುತ್ತೆ ಎಂದುಕೊಂಡಿರಲಿಲ್ಲ. ಹುಬ್ಬಳ್ಳಿ-ಧಾರವಾಡದಲ್ಲಿ ಇನ್ನೂ ಅತಂತ್ರ ಸ್ಥಿತಿಯಿದೆ. ಕಲಬುರ್ಗಿಯಲ್ಲಿ ನಮ್ಮವರನ್ನು ಹೆದರಿಸುವ ಕೆಲಸ ನಡೆದಿದೆ ಎಂದರು.
ಕೆಲವೊಂದು ‘ಆರೋಗ್ಯ’ದ ಪಾಠ ಹೇಳಿದೆ ಸಿದ್ಧಾರ್ಥ್ ಶುಕ್ಲಾ ಹಠಾತ್ ಸಾವು
ಬಿಜೆಪಿ ನಾಯಕರು ಹಣ, ಅಧಿಕಾರ ದುರ್ಬಳಕೆ ಮಾಡಿಕೊಂಡು ಪಾಲಿಕೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಯಲ್ಲಿ ನಾವೇ ಗೆಲ್ಲುತ್ತೇವೆ. ಇದು ನೂರಕ್ಕೆ ನೂರರಷ್ಟು ಖಚಿತ. ಮೂರು ಪಾಲಿಕೆ ಚುನವಾಣೆ ಮುಂಬರುವ ವಿಧಾನಸಭಾ ಚುನಾವಣೆ ದಿಕ್ಸೂಚಿಯಾಗಲಾರದು. ರಾಜ್ಯದಲ್ಲಿ ಬಿಜೆಪಿ ಪರ ಅಲೆ ಇದೆ ಎನ್ನುವುದಾದರೆ ಹುಬ್ಬಳ್ಳಿ-ಧಾರವಾಡದಲ್ಲಿ ಬಿಜೆಪಿಗೆ ಹೆಚ್ಚು ಮತಗಳು ಬರಬೇಕಿತ್ತು ಯಾಕೆ ಬಂದಿಲ್ಲ? ಹಾಗಾಗಿ ಬಿಜೆಪಿ ಪರ ಅಲೆ ಎನ್ನುವುದು ಸುಳ್ಳು ಎಂದು ಹೇಳಿದರು.