ಹಬ್ಬಗಳಲ್ಲಿ ದೀಪಾವಳಿ ಹಬ್ಬ ವಿಶೇಷವಾದುದು. ನರಕ ಚತುರ್ದಶಿ, ಬಲಿಪಾಡ್ಯಮಿ, ಲಕ್ಷ್ಮಿಪೂಜೆ ದೀಪಾವಳಿಯ ಮಹತ್ವವನ್ನು ಸಾರುತ್ತವೆ.
ದೀಪ ಬೆಳಕಿನ ಸಂಕೇತ. ಕತ್ತಲಿನಿಂದ ಬೆಳಕಿನೆಡೆಗೆ ಸಾಗಬೇಕೆಂಬುದನ್ನು ಅದು ತೋರುತ್ತದೆ. ನಮ್ಮಲ್ಲಿನ ಅಜ್ಞಾನ, ಅಂಧಕಾರವನ್ನು ಹೋಗಲಾಡಿಸಬೇಕಿದೆ. ಪ್ರಸ್ತುತ ದೇಶ ಹಲವು ಸವಾಲುಗಳನ್ನು ಎದುರಿಸುತ್ತಿದೆ.
ದೇಶದೆಲ್ಲೆಡೆ ಜನ ದೀಪಾವಳಿ ಹಬ್ಬದ ಸಂಭ್ರಮದಲ್ಲಿರುವಾಗಲೇ ಹುತಾತ್ಮರಾದ ಯೋಧರ ಮನೆಗಳಲ್ಲಿ ಶೋಕ ಮಡುಗಟ್ಟಿದೆ. ಅನೇಕ ಸವಾಲುಗಳು ಎದುರಾಗಿವೆ. ಎಲ್ಲವನ್ನು ತಿಳಿಯಾಗಿಸುವ ನಿಟ್ಟಿನಲ್ಲಿ ಅಂಧಕಾರವನ್ನು ದೂರ ಮಾಡಬೇಕಿದೆ.
ಸಮಾಜದಲ್ಲಿ ಅತ್ಯಾಚಾರ, ಅನಾಚಾರದಂತಹ ಕೃತ್ಯಗಳು ಹೆಚ್ಚಾಗುತ್ತಿವೆ. ಜನರ ನಡುವೆ ನಂಬಿಕೆ ಮರೆಯಾಗತೊಡಗಿದೆ. ಹಬ್ಬದ ಆಚರಣೆ ಎಂದರೆ ಕೇವಲ ಅಡುಗೆ, ಪಟಾಕಿಗೆ ಸೀಮಿತವಲ್ಲ. ಪ್ರತಿಯೊಂದಕ್ಕೂ ಒಂದು ಹಿನ್ನಲೆ ಇದೆ. ವೈಜ್ಞಾನಿಕ ಕಾರಣಗಳಿವೆ. ಅವೆಲ್ಲವನ್ನು ತಿಳಿಯುವ ಪ್ರಯತ್ನವಾಗಬೇಕಿದೆ.
ಪಟಾಕಿಯ ಬದಲು ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಬೇಕಿದೆ. ಮಕ್ಕಳಿಗೆ ಪಟಾಕಿಯಿಂದಾಗುವ ಅನಾಹುತಗಳ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ದೀಪಾವಳಿ ಬೆಳಕಿನ ಹಬ್ಬ. ಎಲ್ಲೆಡೆ ಅಂಧಕಾರವನ್ನು ಕಳೆದು ಮನೆ, ಮನಗಳಲ್ಲಿ ಹೊಸ ಬೆಳಕನ್ನು ಮೂಡಿಸಲಿ.
ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು….