ಮಂಗಳವಾರದಂದು ಗೌರಿ ಹಬ್ಬ ಆಚರಿಸಿದ ಬಳಿಕ ಇಂದು ಗಣೇಶೋತ್ಸವ ಆಚರಣೆಗೆ ಅದ್ದೂರಿ ಸಿದ್ಧತೆ ನಡೆದಿದೆ. ಕೊರೊನಾ ಕಾರಣಕ್ಕಾಗಿ ಕಳೆದ ಎರಡು ವರ್ಷಗಳಿಂದ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ನಿರ್ಬಂಧವಿದ್ದು, ಈ ಬಾರಿ ಮತ್ತೆ ಈ ಮೊದಲಿನಂತೆ ಅವಕಾಶ ಕಲ್ಪಿಸಿರುವ ಕಾರಣ ಗಲ್ಲಿ ಗಲ್ಲಿಗಳಲ್ಲೂ ಗಣೇಶನ ಪೆಂಡಾಲ್ ಕಂಡುಬರುತ್ತಿದೆ.
ಮನೆಗಳಲ್ಲಿ ಹಲವರು ಈಗಾಗಲೇ ಗಣೇಶ ಮೂರ್ತಿಯನ್ನು ತಂದು ಪೂಜೆ ಪುನಸ್ಕಾರಗಳೊಂದಿಗೆ ಪ್ರತಿಷ್ಠಾಪನೆ ಮಾಡಿದ್ದಾರೆ. ಮತ್ತೆ ಕೆಲವರು ತಮ್ಮ ರಾಶಿಗಳಿಗನುಗುಣವಾಗಿ ನಿಗದಿತ ಸಮಯದಲ್ಲಿ ಮೂರ್ತಿ ತರಲು ಕಾಯುತ್ತಿದ್ದಾರೆ. ಇನ್ನು ಸಾರ್ವಜನಿಕ ಗಣೇಶೋತ್ಸವ ಪ್ರತಿಷ್ಠಾಪನೆಗಾಗಿ ಯುವಕರು ಪೆಂಡಾಲ್ಗಳ ಬಳಿ ಜಮಾಯಿಸಿ ಗಣೇಶ ಮೂರ್ತಿ ತರಲು ಸಿದ್ಧತೆ ನಡೆಸಿದ್ದಾರೆ.
ಬೆಳಗಿನಿಂದಲೇ ಸಾರ್ವಜನಿಕ ಗಣೇಶೋತ್ಸವದ ಪೆಂಡಾಲ್ಗಳಲ್ಲಿ ಭಕ್ತಿಗೀತೆ ಮೊಳಗುತ್ತಿದ್ದು, ಎಲ್ಲೆಡೆ ಹಬ್ಬದ ಸಂಭ್ರಮ ಕಂಡುಬರುತ್ತಿದೆ. ಇನ್ನು ಮನೆಗಳಲ್ಲಿ ಗೃಹಿಣಿಯರು ಕಾಯಿ ಕಡಬು, ಸಿಹಿ ತಿಂಡಿ ತಯಾರಿಯಲ್ಲಿ ತೊಡಗಿದ್ದು, ಸಂಜೆ ಕುಟುಂಬ ಸಮೇತ ಸಾರ್ವಜನಿಕವಾಗಿ ಕೂರಿಸಿರುವ ಗಣಪತಿಯ ದರ್ಶನಕ್ಕೆ ಅಣಿಯಾಗುತ್ತಿದ್ದಾರೆ.