ನಾಳೆ ವರ ಮಹಾಲಕ್ಷ್ಮಿ ಹಬ್ಬ. ಹೆಂಗೆಳೆಯರು ಇವತ್ತೇ ಹಬ್ಬಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ತಿದ್ದಾರೆ. ಹೂವು-ಹಣ್ಣುಗಳ ಖರೀದಿ ಭರಾಟೆ ಜೋರಾಗಿದೆ. ಆದ್ರೆ ಈ ಬಾರಿ ವರಮಹಾಲಕ್ಷ್ಮಿ ಸಡಗರಕ್ಕೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಹೂವು, ಹಣ್ಣು ಹಾಗೂ ಇತರೆ ಪೂಜಾ ಸಾಮಗ್ರಿಗಳು ಕೂಡ ದುಬಾರಿಯಾಗಿವೆ.
ಎಡೆಬಿಡದೆ ಸುರಿದ ಮಳೆಗೆ ಬೆಳೆಯೆಲ್ಲ ನಾಶವಾಗಿದೆ. ಹೂ, ಬಾಳೆಕಂದು, ಸೊಪ್ಪು ಇವುಗಳೂ ವರುಣನ ಪ್ರಭಾವದಿಂದ ನಷ್ಟವಾಗಿವೆ. ಆದ್ದರಿಂದ ಮಲ್ಲಿಗೆ, ಕನಕಾಂಬರ, ಸೇವಂತಿಗೆ, ಗುಲಾಬಿ ಹೀಗೆ ಎಲ್ಲಾ ಹೂವುಗಳ ಬೆಲೆಯಲ್ಲೂ ಭಾರೀ ಹೆಚ್ಚಳವಾಗಿದೆ. ಬಾಳೆಹಣ್ಣಿನ ದರ ಕೂಡ ದುಬಾರಿಯಾಗಿದೆ. ಆದ್ರೂ ಹಬ್ಬದ ಸಂಭ್ರಮದಲ್ಲಿ ಜನ ಖರೀದಿಗೆ ಮುಗಿಬಿದ್ದಿದ್ದಾರೆ.
ಮಲ್ಲೇಶ್ವರಂ, ಗಾಂಧಿಬಜಾರ್, ಯಶವಂತಪುರ, ಕೆ. ಆರ್. ಮಾರುಕಟ್ಟೆಗಳಲ್ಲಿ ಖರೀದಿ ಜೋರಾಗಿದೆ. ರಸ್ತೆಗಳ ಇಕ್ಕೆಲಗಳಲ್ಲಿ ಬಾಳೆಕಂಬ ಮತ್ತು ಮಾವಿನ ತೋರಣಗಳ ಮಾರಾಟ ಭರದಿಂದ ಸಾಗಿದೆ. ಪೂಜೆಗಿಡಲು ಬೇಕಾದ ಹೂವು, ಹಣ್ಣು, ಲಕ್ಷ್ಮಿಗೆ ಉಡಿಸಲು ಸೀರೆ, ಕುಪ್ಪುಸ, ಮುಖವಾಡ ಹೀಗೆ ಪೂಜಾ ಸಾಮಗ್ರಿಗಳಿಗೆ ಭಾರೀ ಬೇಡಿಕೆ ಬಂದಿದೆ.