ದೀಪಾವಳಿ ಹಬ್ಬದ ಖರೀದಿ ಭರಾಟೆ ಜೋರಾಗಿದೆ. ಬೆಲೆ ಏರಿಕೆ ನಡುವೆಯೂ ಜನ ಮಾರುಕಟ್ಟೆಗಳಲ್ಲಿ ತಮಗೆ ಬೇಕಾದ ವಸ್ತುಗಳನ್ನು ಖರೀದಿಸುತ್ತಿದ್ದಾರೆ. ಹಬ್ಬದ ಪ್ರಯುಕ್ತ ಕೆಲವು ಉತ್ಪನ್ನಗಳು, ವಸ್ತುಗಳ ಮೇಲೆ ಮಾರಾಟಗಾರರು ರಿಯಾಯಿತಿ ಘೋಷಿಸಿದ್ದು, ಗ್ರಾಹಕರು ಖರೀದಿಗೆ ಆಸಕ್ತಿ ತೋರಿದ್ದಾರೆ.
ಹಬ್ಬದ ಸಂದರ್ಭದಲ್ಲಿ ಸಾಮಾನ್ಯವಾಗಿ ಹೊಸ ವಸ್ತು, ವಾಹನಗಳನ್ನು ತರಲಾಗುತ್ತದೆ. ಈ ಬಾರಿ ವಾಹನಗಳ ಶೋರೂಂಗಳಲ್ಲಿ, ಎಲೆಕ್ಟ್ರಾನಿಕ್ಸ್ ವಸ್ತುಗಳ ಮಳಿಗೆಗಳಲ್ಲಿಯೂ ಹೆಚ್ಚಿನ ಜನ ಸಂದಣಿ ಕಂಡು ಬಂದಿದೆ.
ದೀಪಾವಳಿ ಹಬ್ಬದಲ್ಲಿ ಮಕ್ಕಳಿಗೆ ಹೊಸ ಬಟ್ಟೆ, ಪಟಾಕಿ ಬಲು ಇಷ್ಟ. ಪಟಾಕಿ ವ್ಯಾಪಾರ ಕೆಲವೆಡೆ ಡಲ್ ಆಗಿದ್ದರೆ, ಮತ್ತೆ ಕೆಲವು ಕಡೆ ಭರ್ಜರಿ ವಹಿವಾಟು ನಡೆದಿದೆ.
ಇನ್ನು ಮನೆಗಳಲ್ಲಿ ಲಕ್ಷ್ಮಿ ಪೂಜೆಗೆ ಸಿದ್ಧತೆ ಮಾಡಿಕೊಳ್ಳಲಾಗ್ತಿದೆ. ವ್ಯವಹಾರಸ್ಥರು ಅಂಗಡಿ, ಶೋರೂಂಗಳಲ್ಲಿ ಲಕ್ಷ್ಮಿ ಪೂಜೆ ಮಾಡಿದರೆ, ರೈತರು ಎತ್ತು, ಟ್ರ್ಯಾಕ್ಟರ್, ಟಿಲ್ಲರ್, ಗಾಡಿ, ಕೃಷಿ ಪರಿಕರ, ಸಲಕರಣೆಗಳನ್ನು ಪೂಜಿಸುತ್ತಾರೆ. ಪೇಟೆಯಲ್ಲಿ ಪೂಜೆಗೆ ಬೇಕಾದ ಹೂವು, ಹಣ್ಣು ಮೊದಲಾದ ಸಾಮಗ್ರಿಗಳನ್ನು ಖರೀದಿಸಿದ್ದಾರೆ.
ಬೆಲೆ ಏರಿಕೆಯ ನಡುವೆಯೂ ಸಂಭ್ರಮ ಜೋರಾಗಿದೆ. ಕೆಲಸದ ಕಾರಣದಿಂದ ಬೇರೆ ಕಡೆ ನೆಲೆಸಿದವರೆಲ್ಲಾ ಊರಿನತ್ತ ಮುಖ ಮಾಡಿದ್ದಾರೆ. ಪ್ರಯಾಣಿಕರ ಸಂಖ್ಯೆ ಜಾಸ್ತಿಯಾಗಿರುವುದರಿಂದ ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸಲಾಗಿದೆ.