ಪೆಟ್ರೋಲ್-ಡೀಸೆಲ್‌ನಂತೆ ನಿಂಬೆ ಹಣ್ಣಿನ ಬೆಲೆಯೂ ಈಗ ಗಗನಕ್ಕೇರಿದೆ. ಒಂದು ಚಿಕ್ಕ ನಿಂಬೆಹಣ್ಣಿನ ಬೆಲೆ 10 ರಿಂದ 15 ರೂಪಾಯಿ ಆಗಿದೆ. ನಿಂಬೆ ಹಣ್ಣಿನ ಬೆಲೆ ಏರಿಕೆಗೆ ಬ್ರೇಕ್ ಹಾಕಲು ವಾರಣಾಸಿಯಲ್ಲಿ ವ್ಯಕ್ತಿಯೊಬ್ಬ ವಿಚಿತ್ರ ಪೂಜೆಯನ್ನೇ ನೆರವೇರಿಸಿದ್ದಾನೆ.
ಆದಿಶಕ್ತಿ ದೇವಸ್ಥಾನದಲ್ಲಿ ತಂತ್ರ ಪೂಜೆ ಮಾಡಿ ನಿಂಬೆಹಣ್ಣನ್ನೇ ಬಲಿ ಕೊಟ್ಟಿದ್ದಾನೆ ಈತ. ವಾರಣಾಸಿಯ ಚಂದ್ವಾ ಚಿತ್ತೂಪುರ ನಿವಾಸಿಯಾಗಿರೋ ಈತ ಬೀರ್ ಬಾಬಾ ದೇವಸ್ಥಾನದಲ್ಲಿ ದುರ್ಗಾ ಮಾತೆಗೆ ಪೂಜೆ ಸಲ್ಲಿಸಿದ್ದಾನೆ. ದುರ್ಗೆಯ ವಿಗ್ರಹದ ಮುಂದೆ ತಂತ್ರ ವಿದ್ಯೆಯ ಸಹಾಯದಿಂದ ನಿಂಬೆ ಹಣ್ಣನ್ನು ಬಲಿ ಅರ್ಪಿಸಿದ್ದಾನೆ.
ಬೆಲೆ ಏರಿಕೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಈತ, ಸರ್ಕಾರ ಬೆಲೆ ಇಳಿಕೆಗೆ ಯಾವುದೇ ಕ್ರಮ ಕೈಗೊಳ್ಳದೇ ಇರುವುದರಿಂದ ಮಂತ್ರ-ತಂತ್ರದ ಸಹಾಯದಿಂದ ಹಣದುಬ್ಬರವನ್ನು ನಿಯಂತ್ರಿಸಬಹುದು ಎಂದಿದ್ದಾನೆ. ನಿಂಬೆಹಣ್ಣುಗಳನ್ನು ಬಲಿ ಕೊಟ್ಟಿರೋದ್ರಿಂದ ಹಣದುಬ್ಬರ ನಿಯಂತ್ರಣಕ್ಕೆ ಬರಲಿದೆ ಅಂತಾ ಈತ ಹೇಳಿದ್ದಾನೆ.
ಸರ್ಕಾರದ ನೀತಿಗಳು ವಿಫಲವಾದಾಗ, ಮಾತಾ ರಾಣಿ ಮಾತ್ರ ಪವಾಡ ಮಾಡಬಹುದು, ಅದಕ್ಕಾಗಿಯೇ ನಾನು ನಿಂಬೆಹಣ್ಣುಗಳನ್ನು ಅರ್ಪಿಸಲು ಇಲ್ಲಿಗೆ ಬಂದಿದ್ದೇನೆ ಎಂದಿದ್ದಾನೆ.
ಬರೀ ನಿಂಬೆಹಣ್ಣು ಮಾತ್ರವಲ್ಲ ಬಹುತೇಕ ಎಲ್ಲಾ ದಿನಬಳಕೆ ವಸ್ತುಗಳ ಬೆಲೆ ಕೂಡ ಗಗನಕ್ಕೇರಿದೆ. ಅಂತರಾಷ್ಟ್ರೀಯ ಕಾರಣಗಳನ್ನು ನೆಪ ಮಾಡಿಕೊಂಡು ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿವೆ. ಇಷ್ಟಾದರೂ ಸರ್ಕಾರ ಮೌನವಾಗಿರೋದು ಜನರ ಆಕ್ರೋಶಕ್ಕೆ ಕಾರಣವಾಗಿದೆ.