ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಜನಸಾಮಾನ್ಯರಿಗೆ ಸಂಕಷ್ಟಗಳ ಸರಮಾಲೆಯನ್ನೇ ತಂದಿಟ್ಟಿದೆ. ತೈಲ ಬೆಲೆ ಹೆಚ್ಚಳದಿಂದ ಪ್ರಯಾಣ ದುಬಾರಿಯಾಗಿದೆ. ಹೋಟೆಲ್, ರೆಸ್ಟೋರೆಂಟ್ ಗಳಲ್ಲೂ ತಿನಿಸುಗಳ ಬೆಲೆಯಲ್ಲಿ ಏರಿಕೆಯಾಗಿದೆ. ಸಾಗಣೆ ವೆಚ್ಚದಲ್ಲಿ ಏರಿಕೆಯಾಗಿರೋದ್ರಿಂದ ತರಕಾರಿಗಳ ಬೆಲೆ ಗಗನಕ್ಕೇರ್ತಾ ಇದೆ.
ಅದರಲ್ಲೂ ನಿಂಬೆ ಹಣ್ಣು ಮತ್ತು ಹಸಿಮೆಣಸಿನಕಾಯಿ ಗೃಹಿಣಿಯರ ಕಣ್ಣಲ್ಲಿ ನೀರು ತರಿಸ್ತಾ ಇದೆ. ಗುಜರಾತ್‌ನಲ್ಲಿ ಒಂದು ನಿಂಬೆ ಹಣ್ಣಿನ ಬೆಲೆ 18-25 ರೂಪಾಯಿ. ಸಗಟು ಮಾರುಕಟ್ಟೆಯಲ್ಲಿ ನಿಂಬೆ ಹಣ್ಣನ್ನು ಕೆಜಿಗೆ ಸುಮಾರು 300 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಕೆಲವು ಕಡೆ ಕೆಜಿ ನಿಂಬೆ ಹಣ್ಣಿನ ಬೆಲೆ 400 ರೂಪಾಯಿಗೆ ತಲುಪಿದೆ. ದೆಹಲಿಯಲ್ಲಿ ಒಂದು ನಿಂಬೆ ಹಣ್ಣಿನ ಬೆಲೆ 10 ರೂಪಾಯಿ ದಾಟಿದೆ.
ಮಾರ್ಚ್ ತಿಂಗಳಿನಿಂದ್ಲೂ ದೆಹಲಿಯಲ್ಲಿ ವಿಪರೀತ ಬಿಸಿಲು, ಸೆಖೆ ಕೂಡ ಮಿತಿಮೀರಿದೆ. ತಂಪಾಗಿ ನಿಂಬೆ ಹಣ್ಣಿನ ಪಾನಕ ಕುಡಿಯೋಣ ಅಂದ್ರೆ ಬೆಲೆ ಏರಿಕೆ ಅದಕ್ಕೂ ಕಲ್ಲು ಹಾಕಿದೆ. ಇತ್ತ ಹೈದರಾಬಾದ್ ತರಕಾರಿ ಮಾರುಕಟ್ಟೆಯಲ್ಲಿ ಒಂದು ಚೀಲ ನಿಂಬೆ ಹಣ್ಣಿಗೆ ಮೊದಲು 700 ರೂಪಾಯಿ ಇತ್ತು. ಅದರ ಬೆಲೆ ಈಗ 3,500 ರೂಪಾಯಿಗೆ ಏರಿಕೆಯಾಗಿದೆ.
ದೆಹಲಿ – 350 ರೂ
ಸೂರತ್ – 300 ರೂ
ಉತ್ತರಾಖಂಡ – 350 ರೂ
ನಾಗ್ಪುರ – 300 ರೂ
ಜೈಪುರ – 400 ರೂ
ನೋಯ್ಡಾ – 428 ರೂ
ಹರಿಯಾಣ – 420 ರೂ
ಮುಂಬೈ – 320 ರೂ
ಕೋಲ್ಕತ್ತಾ – 300 ರೂ
ಹಸಿ ಮೆಣಸಿನಕಾಯಿ ದರ ಕೂಡ ಹೆಚ್ಚಾಗಿದೆ. ಬೆಂಗಳೂರಲ್ಲಿ ಒಂದು ಕೆಜಿ ಹಸಿ ಮೆಣಸಿನಕಾಯಿ ಬೆಲೆ 120 ರೂಪಾಯಿ ದಾಟಿದೆ. ದೆಹಲಿಯಲ್ಲಿ ಕೆಜಿ ಹಸಿ ಮೆಣಸಿನಕಾಯಿ, ಲೀಟರ್ ಪೆಟ್ರೋಲ್ ಗಿಂತಲೂ ದುಬಾರಿ. ನಿಂಬೆಹಣ್ಣು ಮತ್ತು ಹಸಿಮೆಣಸಿನಕಾಯಿ ದಿನನಿತ್ಯದ ಅಗತ್ಯಗಳು. ಅವುಗಳ ಜೊತೆಗೆ ಇತರ ತರಕಾರಿಗಳ ಬೆಲೆಯೂ ಹೆಚ್ಚಳವಾಗ್ತಿದೆ.
ಟೊಮೆಟೊ – 30 ರೂ.
ಸೋರೆಕಾಯಿ – 40 ರೂ.
ಆಲೂಗಡ್ಡೆ – 25 ರೂ.
ಕಲ್ಲಂಗಡಿ – 22 ರೂ.
ನಿಂಬೆಹಣ್ಣು – 350 ರೂ.
ಕ್ಯಾಪ್ಸಿಕಂ – 60 ರೂ.
ಈರುಳ್ಳಿ – 30 ರೂ.
ರಷ್ಯಾ-ಉಕ್ರೇನ್ ಯುದ್ಧ, ಬೆಲೆ ಏರಿಕೆ ಮೇಲೆ ಪರಿಣಾಮ ಬೀರಿದೆ. ಧಾನ್ಯ ಮತ್ತು ಸಸ್ಯಜನ್ಯ ಎಣ್ಣೆಗಳಂತಹ ಆಹಾರ ಪದಾರ್ಥಗಳ ಬೆಲೆ ಏರಿಕೆಗೆ ಯುದ್ಧವೇ ಕಾರಣ. ಯಾಕಂದ್ರೆ ಆಹಾರ ಪದಾರ್ಥಗಳ ಪೂರೈಕೆಗೆ ಯುದ್ಧದಿಂದ ಅಡೆತಡೆ ಉಂಟಾಗಿದೆ. ಗೋಧಿ, ಓಟ್ಸ್, ಬಾರ್ಲಿ ಮತ್ತು ಜೋಳ ಸೇರಿದಂತೆ ವಿವಿಧ ಧಾನ್ಯಗಳ ದರ ಶೇಕಡಾ 17.1 ರಷ್ಟು ಹೆಚ್ಚಳವಾಗಿದೆ.