ಜಗತ್ತಿನ ಅತ್ಯಂತ ಶ್ರೀಮಂತ ಉದ್ಯಮಿ, ಟೆಸ್ಲಾ ಕಂಪನಿಯ ಮಾಲೀಕ ಎಲೊನ್ ಮಸ್ಕ್ ಟ್ವಿಟ್ಟರ್ ಅನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದಾರೆ. ಟ್ವಿಟ್ಟರ್ ಅನ್ನು ಅತಿಕ್ರಮಿಸಿಕೊಂಡ ಬೆನ್ನಲ್ಲೇ ಎಲೊನ್ ಮಸ್ಕ್, ಕಂಪನಿಯ ಸಿಇಓ ಆಗಿದ್ದ ಪರಾಗ್ ಅಗರ್ವಾಲ್ ಮತ್ತು ಮುಖ್ಯ ಹಣಕಾಸು ಅಧಿಕಾರಿ, ಸುರಕ್ಷತಾ ಮುಖ್ಯಸ್ಥರನ್ನು ವಜಾ ಮಾಡಿದ್ದಾರೆ.
ಭಾರತೀಯ ಮೂಲದ ಪರಾಗ್ ಅಗರ್ವಾಲ್, ವಿಜಯ ಗಡ್ಡೆ ಮತ್ತು ಇನ್ನೂ ಇಬ್ಬರು ಉನ್ನತ ಕಾರ್ಯನಿರ್ವಾಹಕರನ್ನು ವಜಾಗೊಳಿಸಲಾಗಿದೆ. ಪ್ರತಿ ಷೇರಿಗೆ 54.20 ಡಾಲರ್ ಅಂದರೆ ಸುಮಾರು 44 ಶತಕೋಟಿ ಡಾಲರ್ ಮೊತ್ತವನ್ನು ಪಾವತಿಸುವ ಮೂಲಕ ಗುರುವಾರ ಸಂಜೆ ಟ್ವಿಟ್ಟರ್ ಅನ್ನು ಎಲೊನ್ ಮಸ್ಕ್ ತಮ್ಮದಾಗಿಸಿಕೊಂಡರು. ಈ ಒಪ್ಪಂದಕ್ಕೆ ಈಗಾಗ್ಲೇ ಅಧಿಕೃತ ಮುದ್ರೆ ಬಿದ್ದಿದೆ.
ಸಿಇಓ ಹುದ್ದೆ ಕಳೆದುಕೊಂಡರೂ ಪರಾಗ್ ಅಗರ್ವಾಲ್ಗೆ ಕೈತುಂಬಾ ಹಣ ಬರಲಿದೆ. ಒಪ್ಪಂದದಂತೆ ಅಗರವಾಲ್ ಅವರು ತಮ್ಮ ಅನ್ವೆಸ್ಟೆಡ್ ಇಕ್ವಿಟಿಯ ಶೇ.100ರಷ್ಟು ಪಾಲನ್ನು ಪಡೆಯಲಿದ್ದಾರೆ. ಅಂದಾಜು 42 ಮಿಲಿಯನ್ ಡಾಲರ್ ಅವರ ಕೈಸೇರುವ ಸಾಧ್ಯತೆ ಇದೆ.
ಈ ಮೊತ್ತ ಪರಾಗ್ ಅಗರ್ವಾಲ್ ಅವರ ಒಂದು ವರ್ಷದ ವೇತನಕ್ಕೆ ಸಮನಾಗಿದೆ. ಅಗರವಾಲ್ ಅವರು ಮುಖ್ಯ ತಂತ್ರಜ್ಞಾನ ಅಧಿಕಾರಿಯಾಗಿದ್ದಾಗ ಅವರಿಗೆ 30.4 ಮಿಲಿಯನ್ ಡಾಲರ್ ಮೊತ್ತ ಸಿಗುತ್ತಿತ್ತು. CEO ಆದ ಬಳಿಕ ಅಗರವಾಲ್ ಅವರ ಸಂಬಳ 1 ಮಿಲಿಯನ್ ಡಾಲರ್ನಷ್ಟಿತ್ತು. ಸಹ-ಸಂಸ್ಥಾಪಕ ಜಾಕ್ ಡಾರ್ಸೆ ಅನಿರೀಕ್ಷಿತವಾಗಿ ರಾಜೀನಾಮೆ ನೀಡಿದ ನಂತರ ಪರಾಗ್ ಅಗರವಾಲ್ ಕಳೆದ ವರ್ಷ ನವೆಂಬರ್ನಲ್ಲಿ ಟ್ವಿಟರ್ ಸಿಇಒ ಆಗಿ ಅಧಿಕಾರ ಸ್ವೀಕರಿಸಿದ್ದರು.
ಆದ್ರೆ ಪರಾಗ್ ಅಗರ್ವಾಲ್ ಹಾಗೂ ಎಲೊನ್ ಮಸ್ಕ್ ಇಬ್ಬರ ಮಧ್ಯೆ ತೀವ್ರವಾದ ವೈಮನಸ್ಸಿತ್ತು. ಏಪ್ರಿಲ್ನಲ್ಲಿ ಎಲೊನ್ ಮಸ್ಕ್ ಟ್ವಿಟ್ಟರ್ ಅನ್ನು ಖರೀದಿಸುವ ಬಯಕೆಯನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸಿದಾಗಲೇ ಪರಾಗ್ ಅಗರ್ವಾಲ್ರನ್ನು ವಜಾ ಮಾಡುವ ಬಗ್ಗೆ ಮಾಹಿತಿಗಳು ಲಭ್ಯವಾಗಿತ್ತು. ಸಾಕಷ್ಟು ಬಾರಿ ಪರಾಗ್ ಅಗರ್ವಾಲ್ ಹಾಗೂ ಎಲೊನ್ ಮಸ್ಕ್ ನಡುವೆ ಮಾತಿನ ಚಕಮಕಿಯೂ ನಡೆದಿದೆ. ಕೊನೆಗೂ ಎಲೊನ್ ಮಸ್ಕ್ ಟ್ವಿಟ್ಟರ್ ಅನ್ನು ಆಕ್ರಮಿಸಿಕೊಂಡಿದ್ದರಿಂದ ಪರಾಗ್ಗೆ ಹಿನ್ನಡೆಯಾದಂತಾಗಿದೆ.