ಸೂಪರ್‌ಸ್ಟಾರ್ ರಜನಿಕಾಂತ್ ಅವರ ಪುತ್ರಿ ಐಶ್ವರ್ಯಾ ರಜನಿಕಾಂತ್ ನಿರ್ದೇಶನ ಮಾಡಿರುವ ಬಹುನಿರೀಕ್ಷಿತ ಚಿತ್ರ ʼಲಾಲ್ ಸಲಾಂʼ ಬಿಡುಗಡೆಯಾಗ್ತಿದೆ. ಈ ಶುಕ್ರವಾರ ಲಾಲ್ ಸಲಾಂ ರಿಲೀಸ್ ಆಗ್ತಿದೆ. ಚಿತ್ರದ ಬಿಡುಗಡೆಗೆ ಮುನ್ನವೇ ರಜನಿಕಾಂತ್ ಕುರಿತು ಅಚ್ಚರಿಯ ಸಂಗತಿಯೊಂದು ಬೆಳಕಿಗೆ ಬಂದಿದೆ.
ಲಾಲ್ ಸಲಾಂ ಚಿತ್ರದಲ್ಲಿ ರಜನಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ತಮ್ಮ ಪಾತ್ರಕ್ಕಾಗಿ ನಿಮಿಷಕ್ಕೆ 1 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರಂತೆ ಪಡೆಯಪ್ಪ. ಈ ಚಿತ್ರದಲ್ಲಿ ರಜನಿ 40 ನಿಮಿಷಗಳ ಕಾಲ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗ್ತಾ ಇದೆ. ಮೂಲಗಳ ಪ್ರಕಾರ ಅತಿಥಿ ಪಾತ್ರಕ್ಕಾಗಿ ಅವರು ಪಡೆಯುತ್ತಿರೋ ಸಂಭಾವನೆ ಸುಮಾರು 40 ಕೋಟಿ ರೂಪಾಯಿ. ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಬಂದಿಲ್ಲ.
ರಜನಿಕಾಂತ್, ಲಾಲ್ ಸಲಾಂ ಚಿತ್ರದಲ್ಲಿ ಮೊಯ್ದೀನ್ ಭಾಯಿ ಎಂಬ ಮುಸ್ಲಿಂ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಲಾಲ್ ಸಲಾಂ ಒಂದು ಸ್ಪೋರ್ಟ್ಸ್ ಡ್ರಾಮಾ. ವಿಷ್ಣು ಮತ್ತು ವಿಕ್ರಾಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೆ ನಿರ್ದೇಶಕಿ ಐಶ್ವರ್ಯಾ, ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿರೋ ತಮ್ಮ ತಂದೆ ರಜನಿಕಾಂತ್‌ಗೆ ಕೃತಜ್ಞತೆ ಹೇಳಿದ್ದರು.
ಲಾಲ್ ಸಲಾಂ ಸುಮಾರು 2 ಗಂಟೆ 32 ನಿಮಿಷಗಳ ಸಿನೆಮಾ. ಸೂಕ್ಷ್ಮವಾದ ಕಥಾಹಂದರವನ್ನು ಹೊಂದಿದೆ. ಧಾರ್ಮಿಕ ಏಕತೆಯ ಮಹತ್ವದ ಕುರಿತು ಸಾಮಾಜಿಕ ಸಂದೇಶವನ್ನು ನೀಡುತ್ತದೆ. ಆದರೆ ಕುವೈತ್‌ನಲ್ಲಿ ಈ ಚಿತ್ರವನ್ನು ನಿಷೇಧಿಸಲಾಗಿದೆ ಎಂದು ವರದಿಯಾಗಿದೆ.