ಮೊಡವೆಗಳು ನಮ್ಮ ಮುಖದ ಸೌಂದರ್ಯಕ್ಕೆ ಕುತ್ತು ತರುತ್ತವೆ. ಮೊಡವೆಗಳು ಕೇವಲ ಮುಖದ ಮೇಲೆ ಮಾತ್ರ ಕಾಣಿಸಿಕೊಳ್ಳುವುದಿಲ್ಲ. ಕೆಲವೊಮ್ಮೆ ಬೆನ್ನಿನ ಮೇಲೂ ಮೊಡವೆಗಳೇಳುತ್ತವೆ. ಇದನ್ನು ನಾವು ಸಾಮಾನ್ಯವಾಗಿ ನಿರ್ಲಕ್ಷಿಸುತ್ತೇವೆ. ಆದರೆ ಬ್ಯಾಕ್‌ಲೆಸ್ ಡ್ರೆಸ್‌ಗಳನ್ನು ಧರಿಸಲು ಇಷ್ಟಪಡುವ ಮಹಿಳೆಯರಿಗೆ ಮೊಡವೆ ಕಲೆಗಳಿಂದ ಮುಜುಗರಪಡುವಂತಾಗುತ್ತದೆ.
ಈ ಮೊಡವೆಗಳು ಬೆನ್ನಿನ ಅಂದವನ್ನ ಕೆಡಿಸುತ್ತವೆ. ಮದುವೆ ಸಮಾರಂಭಗಳು ಮತ್ತು ಪಾರ್ಟಿಗಳಲ್ಲಿ ಡೀಪ್ ಬ್ಯಾಕ್‌ನೆಕ್ ಡ್ರೆಸ್‌ಗಳನ್ನು ಧರಿಸಲು ಮೊಡವೆಗಳೇ ಅಡ್ಡಿಯಾಗುತ್ತವೆ. ಬೆನ್ನು ಪೂರ್ತಿಯಾಗಿ ಕವರ್ ಆಗುವಂತಹ ಬಟ್ಟೆಗಳನ್ನೇ ಧರಿಸಬೇಕಾದ ಅನಿವಾರ್ಯತೆ ಬರುತ್ತದೆ. ಬೆನ್ನಿನಲ್ಲಿ ಮೂಡುವ ಮೊಡವೆಗಳನ್ನು ತೊಡೆದುಹಾಕಲು ಕೆಲವೊಂದು ಸುಲಭ ಮಾರ್ಗಗಳಿವೆ. ಬೆನ್ನಿನ ಮೇಲಿನ ಗುಳ್ಳೆಗಳೆದ್ದಾಗ ತುರಿಕೆ ಉಂಟಾಗುತ್ತದೆ. ಉಗುರಿನಿಂದ ತುರಿಸಿದ್ರೆ ಬೆನ್ನಿನಲ್ಲಿ ಶಾಶ್ವತ ಕಲೆ ಮೂಡುತ್ತದೆ. ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಬಹುದಾದ ಮನೆಮದ್ದುಗಳ ಬಗ್ಗೆ ತಿಳಿದುಕೊಳ್ಳೋಣ.
ಅಲೋವೆರಾ ಜೆಲ್: ಅಲೋವೆರಾ ಜೆಲ್ ಚರ್ಮಕ್ಕೆ ತುಂಬಾ ಪ್ರಯೋಜನಕಾರಿ ಅನ್ನೋದು ನಮಗೆಲ್ಲರಿಗೂ ತಿಳಿದಿದೆ. ಅದಕ್ಕಾಗಿಯೇ ಇದನ್ನು ಅನೇಕ ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ. ಬೆನ್ನಿನ ಮೊಡವೆಗಳ ನಿವಾರಣೆಗೆ ಅಲೋವೆರಾ ಜೆಲ್ ಅನ್ನು ಬಳಸಬೇಕು. ಅಲೋವೆರಾ ಸ್ವಲ್ಪ ಸಮಯದವರೆಗೆ ಫ್ರಿಡ್ಜ್‌ನಲ್ಲಿ ಇರಿಸಿ. ನಂತರ ಮೊಡವೆಗಳ ಮೇಲೆ ಹಚ್ಚಿಕೊಳ್ಳಿ. ಸುಮಾರು ಅರ್ಧಗಂಟೆ ಹಾಗೇ ಬಿಟ್ಟು ನಂತರ ಶುದ್ಧ ನೀರಿನಿಂದ ತೊಳೆಯಿರಿ.
ಜೇನುತುಪ್ಪ ಮತ್ತು ದಾಲ್ಚಿನ್ನಿ: ಜೇನುತುಪ್ಪ ಮತ್ತು ದಾಲ್ಚಿನ್ನಿ ಬೆರೆಸಿ ಫೇಸ್ ಪ್ಯಾಕ್ ತಯಾರಿಸಿ. ಇದರಲ್ಲಿ ಆಂಟಿಬ್ಯಾಕ್ಟೀರಿಯಲ್ ಗುಣಲಕ್ಷಣಗಳು ಕಂಡುಬರುತ್ತವೆ. ಇದು ಮೊಡವೆ, ಹುಣ್ಣುಗಳನ್ನು ವಾಸಿಮಾಡಲು ಸಹಾಯ ಮಾಡುತ್ತದೆ. ಒಂದು ಚಮಚ ಜೇನುತುಪ್ಪ ಮತ್ತು ಒಂದು ಚಮಚ ದಾಲ್ಚಿನ್ನಿ ಪುಡಿಯನ್ನು ಮಿಕ್ಸ್ ಮಾಡಿ. ಅದನ್ನು ಮೊಡವೆಗಳಿಗೆ ಹಚ್ಚಿ 15 ನಿಮಿಷ ಹಾಗೇ ಬಿಡಿ. ನಂತರ ನೀರಿನಿಂದ ತೊಳೆದುಕೊಳ್ಳಿ. ಈ ರೀತಿ ಮಾಡುವುದರಿಂದ ಬೆನ್ನ ಮೇಲಿನ ಮೊಡವೆಗಳು ಮಾಯವಾಗುತ್ತವೆ.
ಗ್ರೀನ್ ಟೀ: ಗ್ರೀನ್ ಟೀಯನ್ನು ನಾವು ತೂಕ ಕಡಿಮೆ ಮಾಡಿಕೊಳ್ಳಲು ಕುಡಿಯುತ್ತೇವೆ. ಆದರೆ ಇದು ಚರ್ಮದ ಆರೈಕೆಗೆ ಅತ್ಯುತ್ತಮ ಚಿಕಿತ್ಸೆಯಾಗಿದೆ. ಒಂದು ಕಪ್ ಗ್ರೀನ್ ಟೀ ತಯಾರಿಸಿ, ಈಗ ಅದರಲ್ಲಿ ಹತ್ತಿ ಉಂಡೆಗಳನ್ನು ಅದ್ದಿ. ಆ ಹತ್ತಿಯಿಂದ ಮೊಡವೆಗಳಿಗೆ ಗ್ರೀನ್ ಟೀ ಅನ್ವಯಿಸಿ. ಅದು ಒಣಗಿದ ನಂತರ ನೀರಿನಿಂದ ತೊಳೆದುಕೊಳ್ಳಿ. ಈ ಮನೆಮದ್ದುಗಳನ್ನು ನಿಯಮಿತವಾಗಿ ಮಾಡಿದ್ರೆ ಬೆನ್ನಿನ ಮೇಲಿನ ಮೊಡವೆ ಮತ್ತು ಕಲೆಗಳು ನಿವಾರಣೆಯಾಗುತ್ತವೆ.