ಪುಳಿಯೊಗರೆ ಸುಲಭವಾಗಿ ಮಾಡಬಹುದಾದ ತಿಂಡಿಗಳಲ್ಲಿ ಒಂದಾಗಿದೆ. ರೆಡಿಮೇಡ್ ಪೌಡರ್ ತಂದು ಪುಳಿಯೊಗರೆ ಮಾಡುವ ಬದಲು, ಸುಲಭವಾಗಿ ಮಾಡುವ ಬೆಟ್ಟದ ನೆಲ್ಲಿಕಾಯಿಯ ಪುಳಿಯೊಗರೆ ಕುರಿತ ಮಾಹಿತಿ ಇಲ್ಲಿದೆ.
ಬೇಕಾಗುವ ಪದಾರ್ಥಗಳು : ಉದುರಾಗಿರುವ ಅನ್ನ- 1 ಕಪ್, ಬೆಟ್ಟದ ನೆಲ್ಲಿಕಾಯಿ- ಅರ್ಧ ಕಪ್, ಬ್ಯಾಡಗಿ ಮೆಣಸಿನ ಕಾಯಿ- 6, ಕಡ್ಲೇ ಬೇಳೆ-1 ಚಮಚ, ಉದ್ದಿನ ಬೇಳೆ- 1 ಚಮಚ, ಕಡ್ಲೇ ಕಾಯಿ ಬೀಜ- 2 ಚಮಚ, ಎಳ್ಳು- 1 ಚಮಚ, ಒಣಕೊಬ್ಬರಿ-4 ಚಮಚ, ಅರಿಶಿಣ- ಚಿಟಿಕೆಯಷ್ಟು, ಎಣ್ಣೆ- 3 ಚಮಚ, ಸಾಸಿವೆ-1 ಚಮಚ, ಕೊತಂಬರಿ ಸೊಪ್ಪು- ಸ್ವಲ್ಪ, ಉಪ್ಪು- ರುಚಿಗೆ ತಕ್ಕಷ್ಟು, ಕರಿಬೇವು- ಸ್ವಲ್ಪ.
ತಯಾರಿಸುವ ವಿಧಾನ: ಮೊದಲಿಗೆ ಮಿಕ್ಸಿ ಜಾರಿಗೆ ನೆಲ್ಲಿಕಾಯಿ ತುರಿ, ಒಣಮೆಣಸಿನ ಕಾಯಿ, ಉಪ್ಪು ಅರಿಶಿಣವನ್ನು ಹಾಕಿ ಪೇಸ್ಟ್ ಮಾಡಿಕೊಳ್ಳಿರಿ. ಬಾಣಲೆಯನ್ನು ಬಿಸಿಗಿಟ್ಟು ಎಣ್ಣೆ ಹಾಕಿ, ಅದು ಕಾದ ನಂತರ ಸಾಸಿವೆ ಚಟಪಟಿಸಿ, ನಂತರ ಉದ್ದಿನಬೇಳೆ, ಕಡಲೇ ಬೇಳೆ, ಕರಿಬೇವು, ಕಡ್ಲೇ ಕಾಯಿ ಬೀಜ, ಎಳ್ಳು, ಒಣ ಕೊಬ್ಬರಿಯನ್ನು ಹಾಕಿ ಕೆಂಪಗೆ ಬಾಡಿಸಿ. ರುಬ್ಬಿಕೊಂಡ ಪೇಸ್ಟ್ ಅನ್ನು ಹಾಕಿ ಬಾಡಿಸಿರಿ. ಕೊತಂಬರಿ ಸೊಪ್ಪು ಹಾಕಿ ಕೆಳಗಿಳಿಸಿ ಸ್ವಲ್ಪ ತಣ್ಣಗಾದ ಬಳಿಕ ಅನ್ನಕ್ಕೆ ಹಾಕಿಕೊಂಡು ಸವಿಯಿರಿ.