ಇಡೀ ವಿಶ್ವಕ್ಕೆ ಕೊರೊನಾ ಹರಡಿದ ಕುಖ್ಯಾತಿ ಹೊಂದಿರುವ ಚೀನಾದಲ್ಲಿ ಈಗ ಮತ್ತೆ ಮಹಾಮಾರಿ ವೈರಸ್ ಅಬ್ಬರಿಸುತ್ತಿದೆ. ತನ್ನ ದೇಶದಲ್ಲಿ ನಡೆಯುತ್ತಿರುವ ಈ ತಲ್ಲಣದ ಕುರಿತು ಚೀನಾ ಹೊರ ಜಗತ್ತಿಗೆ ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲವಾದರೂ ಇದೀಗ ಬಂದಿರುವ ಸುದ್ದಿಯೊಂದು ನಿಜಕ್ಕೂ ಕಂಗೆಡಿಸುವಂತಿದೆ.
ಚೀನಾದಲ್ಲಿ ಈ ವಾರ ಒಂದೇ ದಿನ ಬರೋಬ್ಬರಿ 3.7 ಕೋಟಿ ಮಂದಿಗೆ ಕೊರೊನಾ ಸೋಂಕು ತಗುಲಿದೆ ಎಂದು ಹೇಳಲಾಗಿದ್ದು, ಡಿಸೆಂಬರ್ ತಿಂಗಳ ಮೊದಲ 20 ದಿನದ ಅವಧಿಯಲ್ಲಿಯೇ ದೇಶದ ಒಟ್ಟು ಜನಸಂಖ್ಯೆಯ ಪೈಕಿ ಶೇಕಡಾ 18 ರಷ್ಟು ಮಂದಿಗೆ ಕೋವಿಡ್ ಸೋಂಕು ತಗುಲಿದೆ ಎಂದು ಅಂದಾಜಿಸಲಾಗಿದೆ.
ಇದರರ್ಥ ಚೀನಾದಲ್ಲಿ ಈಗಾಗಲೇ 24.8 ಕೋಟಿ ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ ಎಂಬ ಸಂಗತಿಯನ್ನು ಮಾಧ್ಯಮಗಳು ದೃಢಪಡಿಸಿವೆ. ಆದರೆ ಈ ಬಾರಿಯ ರೂಪಾಂತರಿ ಅಷ್ಟೇನೂ ಮಾರಣಾಂತಿಕವಾಗಿಲ್ಲ ಎಂದು ಹೇಳಲಾಗುತ್ತಿದ್ದು, ಆದರೆ ವಯಸ್ಸಾದವರು, ಈಗಾಗಲೇ ವಿವಿಧ ಕಾಯಿಲೆಯಿಂದ ಬಳಲುತ್ತಿರುವವರು ಎಚ್ಚರದಿಂದ ಇರುವುದು ಸೂಕ್ತ ಎನ್ನಲಾಗಿದೆ.