ನಿರುದ್ಯೋಗ ಸಮಸ್ಯೆ ಬಹುತೇಕ ಯುವಕರನ್ನು ಕಾಡುತ್ತಿದೆ. ಹೀಗಾಗಿ ಕೆಲಸ ಪಡೆದುಕೊಳ್ಳಬೇಕೆಂಬ ಆತುರದಲ್ಲಿ ಮೋಸ ಹೋಗುವ ಘಟನೆಗಳು ನಡೆಯುತ್ತಿವೆ. ಯುವಕರ ಉದ್ಯೋಗ ಹೊಂದುವ ಕನಸನ್ನೇ ಬಂಡವಾಳವನ್ನಾಗಿ ಮಾಡಿಕೊಳ್ಳುವ ವಂಚಕರು ಹಣ ಪೀಕುತ್ತಿದ್ದಾರೆ. ಹೀಗೆ ನವದೆಹಲಿಯಲ್ಲಿ ನಡೆದಿರುವ ವಂಚನಾ ಪ್ರಕರಣವೊಂದು ಬೆಚ್ಚಿ ಬೀಳಿಸುವಂತಿದೆ.
ತಾನು ರೈಲ್ವೆ ಆಯುಕ್ತ ಎಂದು ಮಾಜಿ ಸೈನಿಕರೊಬ್ಬರಿಗೆ ಪರಿಚಯಿಸಿಕೊಂಡಿದ್ದ ವಿಕಾಸ್ ರಾಣಾ ಎಂಬ ವಂಚಕ ಅವರ ಮೂಲಕ 28 ಮಂದಿ ಯುವಕರಿಗೆ ಬರೋಬ್ಬರಿ 2.5 ಕೋಟಿ ರೂಪಾಯಿ ವಂಚಿಸಿದ್ದಾನೆ. ಉದ್ಯೋಗಾಕಾಂಕ್ಷಿ ಯುವಕರಿಂದ 2 ಲಕ್ಷ ರೂಪಾಯಿಗಳಿಂದ 24 ಲಕ್ಷ ರೂಪಾಯಿಗಳವರೆಗೆ ವಸೂಲಿ ಮಾಡಿಕೊಂಡಿದ್ದಾನೆ. ಇದೀಗ ಆತನ ವಿರುದ್ಧ ಮಾಜಿ ಸೈನಿಕ ಸುಬ್ಬುಸ್ವಾಮಿ ಪೊಲೀಸರಿಗೆ ದೂರು ನೀಡಿದ್ದಾರೆ.
ವಂಚಕ ವಿಕಾಸ್ ರಾಣಾ ಉದ್ಯೋಗ ಕೋರಿ ಬಂದಿದ್ದ ತಮಿಳುನಾಡಿನ ಈ ಯುವಕರಿಗೆ ನಂಬಿಸುವ ಸಲುವಾಗಿ ದೆಹಲಿ ರೈಲು ನಿಲ್ದಾಣದಲ್ಲಿ ನಿತ್ಯ 8 ಗಂಟೆಗಳ ಕಾಲ ಬಂದು ಹೋಗುವ ರೈಲುಗಳನ್ನು ಎಣಿಸುವ ಕೆಲಸ ಹಚ್ಚಿದ್ದಾನೆ. ಈತನ ಮಾತನ್ನು ನಂಬಿದ ಮುಗ್ಧ ಯುವಕರು ಒಂದು ತಿಂಗಳ ಕಾಲ ರೈಲು ಎಣಿಸುವ ಕೆಲಸ ಮಾಡಿದ್ದಾರೆ. ಇದೀಗ ತಾವು ವಂಚನೆಗೊಳಗಾಗಿರುವುದನ್ನು ಅರಿತು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ.