2021 ರಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ ಒಟ್ಟು 651 ಮಂದಿ ಸಾವನ್ನಪ್ಪಿದ್ದಾರೆ ಎಂದು ನಗರ ಸಂಚಾರ ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.
ಅಪಘಾತಗಳಲ್ಲಿ ಸಾವನ್ನಪ್ಪಿದವರಲ್ಲಿ ಹೆಚ್ಚಿನವರು ದ್ವಿಚಕ್ರ ವಾಹನದಲ್ಲಿ ಪ್ರಯಾಣ ಬೆಳೆಸಿದವರೇ ಆಗಿದ್ದಾರೆ. ಇದರಲ್ಲಿ 328 ಮಂದಿ ಮುಂಬದಿ ಸವಾರರೇ ಆಗಿದ್ದಾರೆ. ಇನ್ನುಳಿದಂತೆ 76 ಮಂದಿ ಹಿಂಬದಿ ಸವಾರರಾಗಿದ್ದಾರೆ ಎನ್ನಲಾಗಿದೆ.
2021ರ ಅಪಘಾತದಲ್ಲಿ 61 ಮಂದಿ ಪಾದಚಾರಿಗಳು ಪ್ರತ್ಯೇಕ ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ರಸ್ತೆ ಸುರಕ್ಷತೆಯ ಬಗ್ಗೆ ಅರಿವಿನ ಕೊರತೆ ಹಾಗೂ ದ್ವಿಚಕ್ರ ವಾಹನ ಸವಾರರ ನಿರ್ಲಕ್ಷ್ಯದ ಚಾಲನೆಯು ರಸ್ತೆ ಅಪಘಾತಕ್ಕೆ ಪ್ರಮುಖ ಕಾರಣ ಎಂದು ತಿಳಿದು ಬಂದಿದೆ.
ಇನ್ನು ದ್ವಿಚಕ್ರ ವಾಹನಗಳ ವಿಚಾರಕ್ಕೆ ಬರೋದಾದರೆ ಹೆಲ್ಮೆಟ್ ಇಲ್ಲದ ವಾಹನ ಸಂಚಾರ, ಹಿಂಬದಿ ಕನ್ನಡಿ ಇಲ್ಲದೇ ಇರುವುದು ಸೇರಿದಂತೆ ವಿವಿಧ ಕಾರಣಗಳು ಅಪಘಾತದಲ್ಲಿ ದುರಂತವನ್ನು ಸೃಷ್ಟಿಸುತ್ತದೆ ಎಂದು ಜಂಟಿ ಪೊಲೀಸ್ ಆಯುಕ್ತ ಬಿ.ಆರ್. ರವಿಕಾಂತೇಗೌಡ ಹೇಳಿದ್ದಾರೆ.
2020ರಲ್ಲಿ 675 ಮಂದಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಇದರಲ್ಲಿ 332 ಮಂದಿ ಬೈಕ್ ಸವಾರರು, 80 ಮಂದಿ ಹಿಂಬದಿ ಸವಾರರು ಹಾಗೂ 164 ಮಂದಿ ಪಾದಚಾರಿಗಳು ಇದ್ದಾರೆ ಎನ್ನಲಾಗಿದೆ.