ಪಶ್ಚಿಮ ಬಂಗಾಳ: ಇತ್ತೀಚಿನ ದಿನಗಳಲ್ಲಿ ಮೊಬೈಲ್ ಗೆ ಅಂಟಿಕೊಂಡವರ ಸಂಖ್ಯೆ ಹೆಚ್ಚಾಗಿಯೇ ಇದೆ. ಒಂದೊತ್ತಿನ ಊಟ ಬೇಕಾದ್ರೂ ಬಿಡಬಹುದು. ಆದರೆ ಮೊಬೈಲ್ ಮಾತ್ರ ಬಿಡಲ್ಲ ಅಂತಾರೆ. ಎದ್ರು, ಮಲಗಿದ್ರೂ ಮೊಬೈಲ್ ಮೊಬೈಲ್ ಮೊಬೈಲ್ ಅಂತಾರೆ. ಪುಟ್ಟ ಮಕ್ಕಳು ಕೂಡ ಮೊಬೈಲ್ ಬಿಟ್ಟು ಇರೋದಿಲ್ಲ. ಆಗೆಲ್ಲ ಚಂದಮಾಮನ ತೋರಿಸಿ ಊಟ ಮಾಡಿಸಿದ್ರೆ, ಇವಾಗೆಲ್ಲ ಮೊಬೈಲ್ ಕೈಲಿ ಕೊಟ್ಟು ಊಟ ಮಾಡಿಸುವಂತಾಗಿದೆ.
ಆದರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದೆ. 16 ವರ್ಷದ ಬಾಲಕಿಯೊಬ್ಬಳು ಫೋನ್ ಗಾಗಿ ರಕ್ತ ಕೊಡಲು ಮುಂದಾಗಿದ್ದಾಳೆ. ಪಶ್ಚಿಮ ಬಂಗಾಳದ ದಕ್ಷಿಣ ದಿನಾಜ್‌ಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಆನ್ ಲೈನ್ ಮೂಲಕ 9,000 ಮೌಲ್ಯದ ಸ್ಮಾರ್ಟ್ ಫೋನ್ ಆರ್ಡರ್ ಮಾಡಿದ್ದ ಈಕೆ ಬಳಿ ಹಣವಿರಲಿಲ್ಲವಂತೆ. ಹೀಗಾಗಿ ಹಣಕ್ಕಾಗಿ ಎಲ್ಲಾ ಪ್ರಯತ್ನ ಮಾಡಿದ್ದಾಳೆ. ಆದರೆ ಹಣ ಮಾತ್ರ ಸಿಕ್ಕಿಲ್ಲ. ಕೊನೆ ಪ್ರಯತ್ನ ಎಂಬಂತೆ ತನ್ನ ರಕ್ತವನ್ನು ಮಾರಾಟ ಮಾಡಿ ದುಡ್ಡು ಪಡೆಯಲು ಹೋಗಿದ್ದಾಳೆ.
ಇದಕ್ಕಾಗಿ ಈಕೆ ಸುಮಾರು 30 ಕಿಮೀ ಪ್ರಯಾಣಿಸಿದ್ದಾಳೆ. ಬಲೂರ್‌ಘಾಟ್ ನಲ್ಲಿರುವ ಜಿಲ್ಲಾ ಆಸ್ಪತ್ರೆಗೆ ಹೋಗಿ ತನ್ನ ರಕ್ತವನ್ನು ಮಾರಾಟ ಮಾಡಲು ವೈದ್ಯರಲ್ಲಿ ಕೇಳಿಕೊಂಡಿದ್ದಾಳೆ. ಬಾಲಕಿಯ ಮಾತಿಗೆ ಒಂದು ಕ್ಷಣ ಗಾಬರಿಗೊಂಡ ವೈದ್ಯರು ಬಾಲಕಿ ಜೊತೆ ಕೆಲ ಕಾಲ ಮಾತನಾಡಿದ್ದಾರೆ.
ಈ ವೇಳೆ ಬಾಲಕಿ ತನ್ನ ಸಹೋದರನಿಗೆ ಹುಷಾರಿಲ್ಲ ಹಾಗಾಗಿ ನನಗೆ ಹಣದ ಅವಶ್ಯಕತೆ ಇದೆ ಎಂದು ಸುಳ್ಳು ಹೇಳಿದ್ದಾಳಂತೆ. ಇದರಿಂದ ಅನುಮಾನಗೊಂಡ ವೈದ್ಯರು ಮತ್ತೆ ವಿಚಾರಣೆ ಮಾಡಿದ್ದಾರೆ. ಈ ವೇಳೆ ತಾನು ಆನ್ ಲೈನ್ ನಲ್ಲಿ ಫೋನ್ ಆರ್ಡರ್ ಮಾಡಿದ್ದು ಅದಕ್ಕಾಗಿ ಹಣದ ಅವಶ್ಯಕತೆ ಇದೆ ಎಂದು ಸತ್ಯ ಹೇಳಿಕೊಂಡಿದ್ದಾಳೆ. ಬಾಲಕಿಯ ಮಾತಿಗೆ ಗಾಬರಿಯಾದ ವೈದ್ಯರು ಆಕೆಗೆ ಸಮಾಧಾನ ಮಾಡಿ, ಪೋಷಕರನ್ನು ಆಸ್ಪತ್ರೆಗೆ ಕರೆಸಿ ನಡೆದ ಘಟನೆ ವಿವರಿಸಿದ್ದಾರೆ. ಜೊತೆಗೆ ಬಾಲಕಿಗೆ ಬುದ್ದಿವಾದ ಹೇಳಿದ್ದಾರೆ.