ಭಾರತೀಯರು ‘ಚಿನ್ನ’ ಪ್ರಿಯರು ಎಂಬುದು ಬಹುತೇಕ ಗೊತ್ತಿರುವ ಸಂಗತಿಯೇ. ಚಿನ್ನ ಕೇವಲ ಆಭರಣವಾಗಿ ಮಾತ್ರವಲ್ಲ ಆಪತ್ಕಾಲದಲ್ಲೂ ನೆರವಿಗೆ ಬರುತ್ತದೆ ಎಂಬ ಕಾರಣಕ್ಕೆ ಬಹುತೇಕರು ಒಂದಷ್ಟಾದರೂ ಚಿನ್ನ ಖರೀದಿಗೆ ಮುಂದಾಗುತ್ತಾರೆ.
ಆದರೆ ಕೆಲವೊಬ್ಬರು ವಾಮ ಮಾರ್ಗಗಳಲ್ಲಿ ಇದನ್ನು ಸಂಗ್ರಹಿಸಲು ಮುಂದಾದ ವೇಳೆ ಸಿಕ್ಕಿ ಬೀಳುತ್ತಾರೆ. ಅದರಲ್ಲೂ ವಿದೇಶಗಳಿಂದ ಚಿನ್ನ ತರಲು ತರಹೇವಾರಿ ಮಾರ್ಗಗಳನ್ನು ಅನುಸರಿಸಲಾಗುತ್ತಿದ್ದು, ಅಷ್ಟಾಗಿಯೂ ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿ ಬೀಳುತ್ತಾರೆ.
ಚಿನ್ನವನ್ನು ಅಕ್ರಮವಾಗಿ ತರುತ್ತಿದ್ದ ವೇಳೆ ಕಳೆದ 10 ವರ್ಷಗಳಲ್ಲಿ ದೇಶದಾದ್ಯಂತ ಒಟ್ಟಾರೆ 29,506 ಪ್ರಕರಣಗಳು ದಾಖಲಾಗಿದ್ದು ವಶಪಡಿಸಿಕೊಂಡಿರುವ ಚಿನ್ನದ ಮೌಲ್ಯ ಬರೋಬ್ಬರಿ 9,661.60 ಕೋಟಿ ರೂಪಾಯಿಗಳೆಂದು ತಿಳಿದು ಬಂದಿದೆ.
ಕೇಂದ್ರ ಹಣಕಾಸು ಸಚಿವಾಲಯವೇ ಲೋಕಸಭೆಯಲ್ಲಿ ಈ ಕುರಿತು ಮಾಹಿತಿ ನೀಡಿದ್ದು, ತಮಿಳುನಾಡು, ಮಹಾರಾಷ್ಟ್ರ ಹಾಗೂ ಕೇರಳದಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿವೆ ಎಂದು ತಿಳಿಸಲಾಗಿದೆ.