ನೀವು ಆನ್ಲೈನ್ನಲ್ಲಿ ಅಶ್ಲೀಲ ಸಿನಿಮಾವನ್ನು ವೀಕ್ಷಿಸಿದ್ದೀರಾ ಹಾಗೂ ಇದು ಕಾನೂನುಬಾಹಿರ ಎಂದು ಜನರನ್ನ ಬೆದರಿಸಿ ಹಣ ಪೀಕುತ್ತಿದ್ದ ಮೂವರು ಖದೀಮರನ್ನ ದೆಹಲಿ ಸೈಬರ್ ಸೆಲ್ ಪೊಲೀಸರು ಬಂಧಿಸಿದ್ದಾರೆ. ಹಣ ಸುಲಿಗೆಗೆ ಜನರನ್ನು ಟಾರ್ಗೆಟ್ ಮಾಡುತ್ತಿದ್ದ ಈ ಮೂವರು ಸಂತ್ರಸ್ತರಿಗೆ ಪೊಲೀಸ್ ಹೆಸರಿನಲ್ಲಿ ನಕಲಿ ನೋಟಿಸ್ ಕಳುಹಿಸುತ್ತಿದ್ದರು. ಕಾನೂನು ಕ್ರಮವನ್ನ ಎದುರಿಸಿ ಇಲ್ಲವಾದಲ್ಲಿ 3000 ರೂಪಾಯಿ ದಂಡ ಪಾವತಿ ಮಾಡಿ ಎಂದು ಹೇಳುವ ಮೂಲಕ ಹಣ ದೋಚುತ್ತಿದ್ದರು ಎನ್ನಲಾಗಿದೆ.
ಈ ಗ್ಯಾಂಗ್ನ ಉಸ್ತುವಾರಿ ಕಾಂಬೋಡಿಯಾದವರಾಗಿದ್ದಾರೆ. ಕಳೆದ ಆರು ತಿಂಗಳಿನಲ್ಲಿ ಈ ಖದೀಮರ ಗ್ಯಾಂಗ್ ಜನರಿಗೆ ಮೋಸ ಮಾಡಿ 30 ಲಕ್ಷ ರೂಪಾಯಿ ಹಣ ವಸೂಲಿ ಮಾಡಿದೆ. ಈ ಆರೋಪಿಗಳನ್ನ ಪತ್ತೆ ಮಾಡಲು ಕಳೆದೊಂದು ವಾರದಲ್ಲಿ ಪೊಲೀಸರು ತಮಿಳುನಾಡಿನಲ್ಲಿ 2000 ಕಿಲೋಮೀಟರ್ವರೆಗೆ ಪ್ರಯಾಣ ಮಾಡಿದ್ದಾಗಿ ಪೊಲೀಸರು ಹೇಳಿದ್ದಾರೆ.
ಇನ್ನು ಪ್ರಕರಣದ ಸಂಬಂಧ ಮಾತನಾಡಿದ ಡಿಸಿಪಿ ಅನ್ಯೇಶ್ ರಾಯ್, ಇಂಟರ್ನೆಟ್ ಬಳಕೆದಾರರಿಗೆ ಬರುತ್ತಿದ್ದ ನಕಲಿ ಜಾಹೀರಾತು ಹಾಗೂ ಸಂದೇಶಗಳ ವಿರುದ್ಧ ಕೆಲ ದೂರುಗಳು ದಾಖಲಾಗಿದ್ದವು. ಈ ಸಂದೇಶಗಳಲ್ಲಿ ಪಾರ್ನೋಗ್ರಫಿ ವೀಕ್ಷಣೆ ಕಾನೂನು ಬಾಹಿರವಾಗಿದೆ,ಇದಕ್ಕಾಗಿ ನೀವು ಕಾನೂನು ಕ್ರಮವನ್ನ ಎದುರಿಸಬೇಕಾಗುತ್ತದೆ. ಇಲ್ಲವಾದಲ್ಲಿ ದಂಡ ಪಾವತಿ ಮಾಡಿ ಎಂದು ಹೇಳಲಾಗ್ತಿತ್ತು. ಈ ನೋಟಿಸ್ಗಳಲ್ಲಿ ದಂಡ ಪಾವತಿ ಮಾಡುವ ಸಲುವಾಗಿ ಯುಪಿಐ ಪೇಮೆಂಟ್ ವಿಧಾನ ಹಾಗೂ ಕ್ಯೂಆರ್ ಕೋಡ್ಗಳನ್ನ ನೀಡಲಾಗ್ತಿತ್ತು ಎಂದು ಹೇಳಿದ್ದಾರೆ.
ವಿಚಾರಣೆ ವೇಳೆ ಈ ಎಲ್ಲಾ ನೋಟಿಸ್ಗಳು ವಿದೇಶಿ ಲೊಕೇಷನ್ ಹೊಂದಿದೆ ಎಂದು ಪೊಲೀಸರಿಗೆ ತಿಳಿದುಬಂದಿದೆ. ಪೊಲೀಸರು ಆರೋಪಿಗಳು ಹಾಗೂ ಸಂತ್ರಸ್ತರ ಬ್ಯಾಂಕ್ ವ್ಯವಹಾರಗಳನ್ನ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ತಮಿಳುನಾಡಿನಲ್ಲಿ ಇರುವ ಬ್ಯಾಂಕ್ ಖಾತೆಗಳಿಂದಲೇ ಆರೋಪಿಗಳು ಹಣವನ್ನ ಪಡೆದಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ.
ಆರೋಪಿಗಳು ಎಲ್ಲಾ ಕಡೆ ನಕಲಿ ವಿಳಾಸ ನೀಡಿದ್ದರಿಂದ ಪೊಲೀಸರಿಗೆ ಇವರನ್ನು ಹುಡುಕುವುದು ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಒಂದು ವಾರಗಳ ಕಾಲ ತಮಿಳುನಾಡಿನಲ್ಲಿಯೇ ಬೀಡು ಬಿಟ್ಟಿದ್ದ ದೆಹಲಿ ಪೊಲೀಸರು ಕೊನೆಗೂ ಮೂವರು ಆರೋಪಿಗಳನ್ನ ಖೆಡ್ಡಾಗೆ ಕೆಡವುವಲ್ಲಿ ಯಶಸ್ವಿಯಾಗಿದ್ದಾರೆ. ಸಂಪೂರ್ಣ ಪ್ರಕರಣದ ಮಾಸ್ಟರ್ ಮೈಂಡ್ ಬಿ. ಧಿನುಶಾಂತ್ ಸೇರಿದಂತೆ ಮೂವರನ್ನ ಪೊಲೀಸರು ಬಂಧಿಸಿದ್ದಾರೆ.
ವಿಚಾರಣೆಯ ವೇಳೆ ಧಿನುಶಾಂತ್ ಕಾಂಬೋಡಿಯಾದಲ್ಲಿರುವ ತನ್ನ ಸಹೋದರ ಈ ಸಂಪೂರ್ಣ ಕೃತ್ಯದ ಉಸ್ತುವಾರಿ ನೋಡಿಕೊಳ್ತಿದ್ದ ಎಂದು ಹೇಳಿದ್ದು ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.