ಸ್ಕೂಟಿಯಲ್ಲಿ ಬಂದ ದಂಪತಿ ರಸ್ತೆ ಬದಿಯ ಮ್ಯಾನ್ ಹೋಲ್ ಕಂದಕಕ್ಕೆ ಉರುಳಿದ ವಿಡಿಯೋ ವೈರಲ್ ಆಗಿದೆ. ಈ ಘಟನೆ ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯ ಕಿಶನ್‌ಪುರ ಪ್ರದೇಶದಲ್ಲಿ ನಡೆದಿದೆ.
ಭಾರೀ ಮಳೆಯ ನಡುವೆ ರಸ್ತೆ ಬದಿಯಲ್ಲಿ ತಮ್ಮ ವಾಹನ ನಿಲ್ಲಿಸಲು ಮುಂದಾದಾಗ ಕಂದಕದ ಅರಿವಿಲ್ಲದೇ ವಾಹನ ಸಹಿತ ಮುಗ್ಗರಿಸಿದರು.
ತಕ್ಷಣವೇ ದಾರಿಹೋಕರು ದಂಪತಿಗೆ ಸಹಾಯ ಮಾಡಲು ಧಾವಿಸುವುದು ವಿಡಿಯೋದಲ್ಲಿ ಕಂಡುಬರುತ್ತದೆ. ಅವರನ್ನು ಸುರಕ್ಷಿತವಾಗಿ ಎಳೆದುಕೊಂಡರೂ ಸ್ಕೂಟಿ ಮಾತ್ರ ಕಾಣಿಸಲಿಲ್ಲ.
ಯುಪಿ ಪೊಲೀಸ್ ಪೇದೆ ದಯಾನಂದ್ ಸಿಂಗ್ ಅಟ್ರಿ ಮತ್ತು ಅವರ ಪತ್ನಿ ಅಂಜು ಅತ್ರಿ ಎಂದು ಗುರುತಿಸಲಾದ ದಂಪತಿ ವೈದ್ಯರನ್ನು ನೋಡಲು ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. “ನನ್ನ ಮುಂದಿರುವ ರಸ್ತೆಯು ಜಲಾವೃತಗೊಂಡಿದ್ದರಿಂದ, ನಾನು ಹೊಂಡವನ್ನು ನೋಡಲಾಗದೆ ಅದರಲ್ಲಿ ಬಿದ್ದಿದ್ದೇನೆ” ಎಂದು ದಯಾನಂದ ಸಿಂಗ್ ಅತ್ರಿ ಮಾಧ್ಯಮಕ್ಕೆ ತಿಳಿಸಿದ್ದಾರೆ
ಮಳೆಗಾಲದಲ್ಲಿ ಈ ಭಾಗದ ರಸ್ತೆಗಳು ಆಗಾಗ್ಗೆ ಜಲಾವೃತಗೊಳ್ಳುತ್ತವೆ. ಇದರಿಂದ ಈ ಹಿಂದೆ ಹಲವಾರು ಅವಘಡಗಳು ಸಂಭವಿಸಿವೆ. ಈ ಹೊಂಡವು ಈ ಹಿಂದೆ ಹಲವಾರು ಅವಘಡಗಳಿಗೆ ಮೂಲವಾಗಿತ್ತು. ಆದರೂ ನಗರಸಭೆ ಗಮನಹರಿಸಿಲ್ಲ ಎಂದು ಸ್ಥಳೀಯರು ಆರೋಪಿದ್ದಾರೆ.