
ಮಾನವನ ದುರಾಸೆಗೆ ಕಾಡು ನಾಶವಾಗುತ್ತಿರುವ ಕಾರಣ ಪ್ರಾಣಿಗಳು ಆಹಾರ ಅರಸಿ ಜನವಸತಿ ಪ್ರದೇಶಗಳತ್ತ ಬರುತ್ತಿವೆ. ಅಲ್ಲದೇ ಕಾಡು ಹಾದಿಯಲ್ಲಿ ರಸ್ತೆಗಳು ನಿರ್ಮಾಣವಾಗಿರುವ ಕಾರಣ ವಾಹನ ಸಂಚಾರ ಪ್ರಾಣಿಗಳ ಜೀವಕ್ಕೂ ಕುತ್ತು ತರುತ್ತಿದೆ.
ಇಂತವುದೇ ಒಂದು ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಸ್ತೆ ದಾಟುತ್ತಿದ್ದ ಚಿರತೆಯೊಂದಕ್ಕೆ ಕಾರು ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಚಿರತೆ ಬಾನೆಟ್ ಅಡಿ ಸಿಲುಕಿಕೊಂಡು ಪ್ರಾಣ ಉಳಿಸಿಕೊಳ್ಳಲು ಪರದಾಡಿದೆ.
ನಂತರ ಕಾರು ಚಾಲಕ ವಾಹನವನ್ನು ರಿವರ್ಸ್ ತೆಗೆದಿದ್ದು, ತಕ್ಷಣವೇ ಚಿರತೆ ಅಲ್ಲಿಂದ ಓಡಿದೆ. ಈ ವಿಡಿಯೋವನ್ನು ಐಎಫ್‌ಎಸ್ ಅಧಿಕಾರಿ ಸುಸಾಂತ ನಂದಾ, ಚಿತ್ರನಟಿ ರವೀನಾ ಟಂಡನ್ ಸೇರಿದಂತೆ ಹಲವರು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಈ ಘಟನೆ ಎಲ್ಲಿ ಮತ್ತು ಯಾವಾಗ ನಡೆದಿದೆ ಎಂಬುದರ ಕುರಿತು ಯಾವುದೇ ಮಾಹಿತಿ ಇಲ್ಲವಾಗಿದ್ದು, ಪಕ್ಕದ ಕಾರಿನಲ್ಲಿದ್ದವರು ಮೊಬೈಲ್ ನಲ್ಲಿ ಈ ದೃಶ್ಯ ಸೆರೆಹಿಡಿದು ಹರಿಬಿಟ್ಟಿದ್ದಾರೆ.