ಯುವಕನೊಬ್ಬ ಬೆಕ್ಕನ್ನು ರಕ್ಷಿಸಲು ಹೋಗಿ ತಾನೇ ತೊಂದರೆಗೆ ಸಿಲುಕಿಕೊಂಡಿರುವ ಘಟನೆ ಅಮೆರಿಕಾದಲ್ಲಿ ನಡೆದಿದೆ.
ಮರವೇರಿದ ಬೆಕ್ಕನ್ನು ರಕ್ಷಿಸಲು ಸ್ವತಃ ತಾನೇ ಮರಕ್ಕೆ ಹತ್ತಿದ ಯುವಕನಿಗೆ ಕೆಳಗಿಳಿಯಲು ಸಾಧ್ಯವಾಗಲಿಲ್ಲ. ಕೊನೆಗೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿ ಆತನನ್ನು ರಕ್ಷಿಸಿದ್ದಾರೆ. ಫೇಸ್ಬುಕ್ ನಲ್ಲಿ ವಿಡಿಯೋ ಸಹಿತ ಇಂಡಿಯಾನಾ ಪೊಲಿಸ್ ಅಗ್ನಿಶಾಮಕ ಇಲಾಖೆ ಪೋಸ್ಟ್ ಮಾಡಿದೆ. ರಕ್ಷಣಾ ಕಾರ್ಯಾಚರಣೆಯ ವಿಡಿಯೋವನ್ನು ಇಲಾಖೆ ಹಂಚಿಕೊಂಡಿದೆ.
ಓವನ್ ಎಂದು ಗುರುತಿಸಲಾದ ಯುವಕ ಮಾರ್ಚ್ 4 ರಂದು ಪಾರ್ಕ್‌ನಲ್ಲಿ ಮರಕ್ಕೆ 35 ಅಡಿಗಳಷ್ಟು ಏರಿದ್ದಾನೆ. ಆದರೆ, ಆತನಿಗೆ ಕೆಳಗಿಳಿಯಲು ಸಾಧ್ಯವಾಗದೆ ಒದ್ದಾಡಿದ್ದಾನೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ, ರಕ್ಷಣಾ ಕಾರ್ಯಾಚರಣೆ ನಡೆಸಿದೆ. ಎಲ್ಲಿ ಬಿದ್ದುಬಿಡುತ್ತೀನೋ ಎಂಬ ಭಯದಲ್ಲಿ ಓವನ್ ಮರವನ್ನು ಬಿಗಿಯಾಗಿ ಹಿಡಿದುಕೊಂಡು ಮಲಗಿದ್ದ. ಸಿಬ್ಬಂದಿಯೊಬ್ಬರು ಓವನ್ ಬಳಿಗೆ ಬಂದು ಹಗ್ಗವನ್ನು ಜೋಡಿಸಿ ನಂತರ, ಇತರ ಸಿಬ್ಬಂದಿಯ ಸಹಾಯದಿಂದ ಆತನನ್ನು ಕೆಳಕ್ಕಿಳಿಸಲಾಯಿತು. ಈ ಎಲ್ಲಾ ದೃಶ್ಯಗಳನ್ನು ಮರದ ಮೇಲೆ ಕುಳಿತಿದ್ದ ಬೆಕ್ಕಿನ ಮರಿ ನೋಡುತ್ತಲೇ ಇತ್ತು.
ಇನ್ನು ಈ ವಿಡಿಯೋ ವೈರಲ್ ಆಗಿದ್ದು, ಕೆಲವು ಬಳಕೆದಾರರು ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ಶ್ಲಾಘಿಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ರೋಪ್ ಸಿಸ್ಟಮ್ ಬಳಸಿ ಯುವಕನನ್ನು ಒಂದು ಗಂಟೆಗಳ ಕಾರ್ಯಾಚರಣೆಯಲ್ಲಿ ಸುರಕ್ಷಿತವಾಗಿ ರಕ್ಷಿಸಲಾಯಿತು. ನಂತರ ಬೆಕ್ಕನ್ನು ಕೂಡ ರಕ್ಷಿಸಲಾಗಿದೆ ಎಂದು ತಿಳಿಸಲಾಗಿದೆ.