ಶಿವಮೊಗ್ಗ: ಕೇಂದ್ರ ಸರ್ಕಾರದ ಬೆಂಬಲ ಯೋಜನೆಯಡಿ ಭತ್ತ ಖರೀದಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಬೆಂಬಲ ಬೆಲೆಯಡಿ ಭತ್ತ ಖರೀದಿ ಯೋಜನೆಯಡಿ ರಾಜ್ಯದಲ್ಲಿ ಭತ್ತ ಬೆಳೆಯುವ ಕೆಲವು ಜಿಲ್ಲೆಗಳಲ್ಲಿ ಮಾತ್ರ ಖರೀದಿ ಮಾಡಲು ಆದೇಶ ನೀಡಲಾಗಿದೆ. ಆದರೆ, ಶಿವಮೊಗ್ಗ ಸೇರಿದಂತೆ ಭತ್ತ ಬೆಳೆಯುವ ಹಲವು ಜಿಲ್ಲೆಗಳಲ್ಲಿ ಖರೀದಿ ಕೇಂದ್ರ ಪ್ರಾರಂಭಿಸಿಲ್ಲ. ಪ್ರಸ್ತುತ ಈಗ ಸುಗ್ಗಿ ಕಾಲವಾಗಿದ್ದು, ಸಣ್ಣ ರೈತರು ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ವರ್ತಕರಿಗೆ ಭತ್ತ ಮಾರಾಟ ಮಾಡುತ್ತಿದ್ದಾರೆ ಎಂದರು.
ಅಲ್ಲದೇ ಅತಿವೃಷ್ಠಿಯಿಂದಾಗಿ ಭತ್ತದ ಇಳುವರಿ ಸಹ ಕುಂಠಿತವಾಗಿದೆ. ಇಂತಹ ಸಂದರ್ಭದಲ್ಲಿ ರೈತರು ಕಡಿಮೆ ಬೆಲೆಗೆ ಭತ್ತ ಮಾರಾಟ ಮಾಡುವಂತಹ ಪರಿಸ್ಥಿತಿ ಬಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಾಯದಿಂದ ಪ್ರತಿ ಕ್ವಿಂಟಾಲ್ ಗೆ 500 ರೂ. ಸಹಾಯಧನ ನೀಡಲಾಗುತ್ತಿದ್ದು, ಪ್ರತಿ ರೈತರಿಂದ 40 ಕ್ವಿಂಟಾಲ್ ಖರೀದಿ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ, ಶಿವಮೊಗ್ಗ, ದಾವಣಗೆರೆ ಇತರೆ ಜಿಲ್ಲೆಗಳ ಬೆಳೆಗಾರರಿಗೂ 500 ರೂ. ಸಹಾಯಧನ ನೀಡಿ ಭತ್ತ ಖರೀದಿಸಬೇಕೆಂದು ಒತ್ತಾಯಿಸಿದರು.
ಭತ್ತ ಖರೀದಿ ಕೇಂದ್ರವನ್ನು ಕೆ.ಎಸ್.ಎಫ್.ಸಿ. ಮೂಲಕ ಖರೀದಿಸುವ ಆದೇಶ ಕೈಬಿಟ್ಟು ಅಕ್ಕಿ ಗಿರಣಿಗಳ ಮೂಲಕ ಖರೀದಿಸಬೇಕು. ಈಗಾಗಲೇ ಭತ್ತದ ಕಟಾವು ಪ್ರಾರಂಭವಾಗಿರುವುದರಿಂದ ಕೂಡಲೇ ಭತ್ತ ಖರೀದಿ ಕೇಂದ್ರಗಳನ್ನು ತೆರೆಯಬೇಕೆಂದು ಒತ್ತಾಯಿಸಿದರು.
ಜೊತೆಗೆ ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ಆರಂಭಿಸಬೇಕು. ಸರ್ಕಾರ ಮೆಕ್ಕೆಜೋಳ ಕ್ವಿಂಟಾಲ್ ಗೆ 3000 ರೂ. ಬೆಲೆ ನಿಗದಿ ಮಾಡಿ ಖರೀದಿ ಕೇಂದ್ರ ಪ್ರಾರಂಭಿಸಿ ರೈತರಿಂದ ಖರೀದಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷ ಹೆಚ್.ಆರ್. ಬಸವರಾಜಪ್ಪ, ಪ್ರಮುಖರಾದ ಇ.ಬಿ. ಜಗದೀಶ್, ಎಸ್. ಶಿವಮೂರ್ತಿ, ಕೆ. ರಾಘವೇಂದ್ರ, ಪಿ.ಡಿ. ಮಂಜಪ್ಪ, ಜಿ.ಎನ್. ಪಂಚಾಕ್ಷರಿ, ಸಿ. ಚಂದ್ರಪ್ಪ ಮೊದಲಾದವರಿದ್ದರು.