
ಮಧ್ಯಾಹ್ನಕ್ಕೆ ಏನು ಸಾಂಬಾರು ಮಾಡುವುದು ಎಂಬ ಚಿಂತೆಯಲ್ಲಿದ್ದೀರಾ…? ಮನೆಯಲ್ಲಿ ಸ್ವಲ್ಪ ಬೆಂಡೆಕಾಯಿ ಇದ್ದರೆ ರುಚಿಕರವಾದ ಬೆಂಡೆಕಾಯಿ ಸಾಸಿವೆ ಮಾಡಿಕೊಂಡು ಸವಿಯಿರಿ. ಥಟ್ಟಂತ ಆಗಿ ಬಿಡುತ್ತೆ.
ಬೇಕಾಗುವ ಸಾಮಗ್ರಿಗಳು:
15 ಬೆಂಡೆಕಾಯಿ, 1 ಟೇಬಲ್ ಸ್ಪೂನ್-ಎಣ್ಣೆ, ಕರಿಬೇವಿನ ಎಲೆ-5 ಎಸಳು, ½ ಕಪ್-ತೆಂಗಿನಕಾಯಿ ತುರಿ, ಹಸಿಮೆಣಸು-3, ಸಾಸಿವೆ-1 ಟೀ ಸ್ಪೂನ್, ಮೊಸರು-1/2 ಕಪ್, ಉದ್ದಿನಬೇಳೆ-1/2 ಟೀ ಸ್ಪೂನ್, ನೀರು ¾ ಕಪ್, ಉಪ್ಪು ರುಚಿಗೆ ತಕ್ಕಷ್ಟು.
ಮಾಡುವ ವಿಧಾನ:
ಮೊದಲಿಗೆ ಬೆಂಡೆಕಾಯಿಯನ್ನು ಚೆನ್ನಾಗಿ ತೊಳೆದು ನೀರಿನ ಪಸೆ ಇಲ್ಲದಂತೆ ಒರೆಸಿ ತೆಗೆಯಿರಿ.
ನಂತರ ಬೆಂಡೆಕಾಯಿಯನ್ನು ಮಧ್ಯಕ್ಕೆ ಸೀಳಿಕೊಂಡು ಚಿಕ್ಕದಾಗಿ ಕತ್ತರಿಸಿಕೊಳ್ಳಿ. ಗ್ಯಾಸ್ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ½ ಟೀ ಸ್ಪೂನ್ ಎಣ್ಣೆ ಹಾಕಿ.
ನಂತರ ಕರಿಬೇವು ಹಾಕಿ ಬೆಂಡೆಕಾಯಿ ಹಾಕಿ ಎಣ್ಣೆಯಲ್ಲಿ ಹುರಿದುಕೊಳ್ಳಿ. ಬೆಂಡೆಕಾಯಿ ಲೋಳೆ ಹೋಗುವವರೆಗೆ ಹುರಿದುಕೊಳ್ಳಿ. ಇದು ತಣ್ಣಗಾದ ನಂತರ ಒಂದು ಪಾತ್ರೆಗೆ ತೆಗೆದಿಟ್ಟುಕೊಳ್ಳಿ.
ನಂತರ ಒಂದು ಮಿಕ್ಸಿ ಜಾರಿಗೆ ತೆಂಗಿನಕಾಯಿ ತುರಿ, ½ ಟೀ ಸ್ಪೂನ್ ಸಾಸಿವೆ, ಹಸಿಮೆಣಸು ಹಾಕಿ ನೀರು ಸೇರಿಸದೇ ಚೆನ್ನಾಗಿ ರುಬ್ಬಿಕೊಳ್ಳಿ. ನಂತರ ಸ್ವಲ್ಪ ನೀರು ಸೇರಿಸಿ ರುಬ್ಬಿಕೊಳ್ಳಿ. ಆಮೇಲೆ ಈ ಮಿಶ್ರಣವನ್ನು ಬೆಂಡೆಕಾಯಿಗೆ ಸೇರಿಸಿ ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
ನಂತರ ಮೊಸರು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಒಗ್ಗರಣೆ ಪಾತ್ರೆಗೆ ಸ್ವಲ್ಪ ಎಣ್ಣೆ ಹಾಕಿ ಅದಕ್ಕೆ ಸಾಸಿವೆ, ಕರಿಬೇವು, ಉದ್ದಿನ ಬೇಳೆ ಹಾಕಿ ನಂತರ ಈ ಒಗ್ಗರಣೆಯನ್ನು ಬೆಂಡೆಕಾಯಿ ಮಿಶ್ರಣಕ್ಕೆ ಸೇರಿಸಿದರೆ ರುಚಿಕರವಾದ ಬೆಂಡೆಕಾಯಿ ಸಾಸಿವೆ ಸವಿಯಲು ಸಿದ್ಧ.