ಚಪಾತಿ ಜತೆ ಸವಿಯಲು ರಾಯಿತ ಇದ್ದರೆ ಚೆನ್ನಾಗಿರುತ್ತದೆ. ಅದರಲ್ಲೂ ಬೆಂಡೆಕಾಯಿ ರಾಯಿತ ಇದ್ದರೆ ಚಪಾತಿ ಹೊಟ್ಟೆಗೆ ಹೋಗಿದ್ದೆ ತಿಳಿಯುವುದಿಲ್ಲ. ಇಲ್ಲಿ ಸುಲಭವಾಗಿ ಮಾಡಬಹುದಾದ ಬೆಂಡೆಕಾಯಿ ರಾಯಿತ ಇದೆ ಮನೆಯಲ್ಲಿ ಮಾಡಿ ನೋಡಿ.
ಬೇಕಾಗುವ ಸಾಮಗ್ರಿಗಳು:
ಬೆಂಡೆಕಾಯಿ-10, ಈರುಳ್ಳಿ- 1, ಎಣ್ಣೆ-1 ಟೀ ಸ್ಪೂನ್, ಕರಿಬೇವು-ಸ್ವಲ್ಪ, ಹಸಿಮೆಣಸು-1, ಜೀರಿಗೆ-1/2 ಟೀ ಸ್ಪೂನ್, ಮೊಸರು-1 ಕಪ್, ಖಾರದ ಪುಡಿ-1/2 ಟೀ ಸ್ಪೂನ್, ಉಪ್ಪು-ರುಚಿಗೆ ತಕ್ಕಷ್ಟು.
ಮಾಡುವ ವಿಧಾನ:
ಬೆಂಡೆಕಾಯಿಯನ್ನು ತೊಳೆದು ನೀರಿನ ಪಸೆ ಇಲ್ಲದಂತೆ ಒರೆಸಿಕೊಂಡು ನಂತರ ವೃತ್ತಾಕಾರವಾಗಿ ಕತ್ತರಿಸಿಕೊಳ್ಳಿ. ಈರುಳ್ಳಿ ಹಾಗೂ ಹಸಿಮೆಣಸನ್ನು ಕತ್ತರಿಸಿಕೊಳ್ಳಿ. ನಂತರ ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ಎಣ್ಣೆ ಹಾಕಿ ಅದು ಬಿಸಿಯಾಗುತ್ತಲೇ ಜೀರಿಗೆ, ಈರುಳ್ಳಿ, ಹಸಿಮೆಣಸು, ಕರಿಬೇವು, ಬೆಂಡೆಕಾಯಿ ಹಾಕಿ ಫ್ರೈ ಮಾಡಿ. ಬೆಂಡೆಕಾಯಿ ಸ್ವಲ್ಪ ಗರಿಗರಿಯಾಗುತ್ತಿದ್ದಂತೆ ಗ್ಯಾಸ್ ಆಫ್ ಮಾಡಿ.
ಒಂದು ಬೌಲ್ ಗೆ ಮೊಸರು ಹಾಕಿ ಚೆನ್ನಾಗಿ ಬೀಟ್ ಮಾಡಿಕೊಳ್ಳಿ. ಇದಕ್ಕೆ ಉಪ್ಪು ಸೇರಿಸಿ ಮಿಕ್ಸ್ ಮಾಡಿ. ನಂತರ ಇದಕ್ಕೆ ಬೆಂಡೆಕಾಯಿ ಮಿಶ್ರಣ ಸೇರಿಸಿ ಖಾರದ ಪುಡಿ ಹಾಕಿ ಸರ್ವ್ ಮಾಡಿ. ಇದು ಅನ್ನದ ಜತೆ ಕೂಡ ಚೆನ್ನಾಗಿರುತ್ತದೆ.