ಸಿಲಿಕಾನ್ ಸಿಟಿ ಬೆಂಗಳೂರಿನ ದಟ್ಟಣೆ ನಿವಾರಿಸಲು ಸ್ಯಾಟಲೈಟ್ ಟೌನ್ ಗಳ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಈ ಮೂಲಕ ಬೆಂಗಳೂರನ್ನು ಅಂತರರಾಷ್ಟ್ರೀಯ ಮಟ್ಟದ ನಗರವಾಗಿಸಲು ಸರ್ಕಾರ ಸಂಕಲ್ಪ ಮಾಡಿದೆ ಹಾಗೂ ಅದಕ್ಕೆ ಬದ್ಧವಾಗಿದೆ ಎಂದು ಅವರು ಹೇಳಿದ್ದಾರೆ.
ಗಂಗಾನಗರದಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 513ನೇ ಜಯಂತೋತ್ಸವ ಅಂಗವಾಗಿ ಶಾಲಾ ಮಕ್ಕಳಿಗೆ ವಿದ್ಯಾರ್ಥಿ ವೇತನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಕೈಗೊಳ್ಳುವ ಮೂಲಕ ಬೆಂಗಳೂರಿನ ಸಮಗ್ರ ಅಭಿವೃದ್ಧಿಯತ್ತ ಹೆಜ್ಜೆ ಇಟ್ಟಿದ್ದೇವೆ. ಬೆಂಗಳೂರಿನ ದಟ್ಟಣೆ ನಿವಾರಿಸಲು ಸ್ಯಾಟಲೈಟ್ ಟೌನ್ ಗಳ ನಿರ್ಮಾಣ ಕ್ಕೆ ನಮ್ಮ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದೆ. ಮೂಲಭೂತ ಸೌಕರ್ಯ ಬೆಂಗಳೂರಿನ ನಾಗರಿಕರಿಗೆ ದೊರೆಯಬೇಕು ಎಂಬ ದೂರದೃಷ್ಟಿಯಿಂದ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಬೆಂಗಳೂರು ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ಈಗಾಗಲೇ ನಗರೋತ್ಥಾನ ಯೋಜನೆಯಡಿ 6 ಸಾವಿರ ಕೋಟಿ ರೂ.ಗಳ ಕಾಮಗಾರಿಗಳು ಪ್ರಾರಂಭ ವಾಗಿವೆ. ರಾಜಕಾಲುವೆಗಳ ಅಭಿವೃದ್ಧಿ ಗೆ 1600 ಕೋಟಿ ರೂ.ಗಳ ನ್ನು ಒದಗಿಸಲಾಗಿದೆ. ಸಬ್ ಅರ್ಬನ್ ರೈಲು ಯೋಜನೆಗೆ ಪ್ರಧಾನಮಂತ್ರಿಗಳು ಇತ್ತೀಚೆಗೆ ಶಂಕುಸ್ಥಾಪನೆ ಮಾಡಿದ್ದಾರೆ. ಪೆರಿಫೆರಲ್ ರಿಂಗ್ ರೋಡಿಗೆ ಟೆಂಡರ್ ಕರೆಯಲಾಗಿದೆ. ಈ ವರ್ಷ ಕಾಮಗಾರಿ ಪ್ರಾರಂಭವಾಗುತ್ತದೆ. ಮೆಟ್ರೋ ವಿಸ್ತರಣೆಯಾಗುತ್ತಿದೆ. ನಗರದ ಸೌಂದರ್ಯೀಕರಣಕ್ಕೆ ಕೆರೆಗಳ ಅಭಿವೃದ್ಧಿ ಕೈಗೊಳ್ಳಲಾಗಿದೆ. ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದೆ. ಬಡವರು ಇರುವ ಸ್ಥಳಗಳ ಅಭಿವೃದ್ಧಿಗೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಹಿಂದಿನ ಸರ್ಕಾರಗಳು ಕೆಲಸಗಳನ್ನು ಮಾಡದಿರುವ ಕಾರಣದಿಂದ ಒಂದೇ ಬಾರಿಗೆ ಸಮಸ್ಯೆಗಳು ಒದಗಿಬಂದಿದೆ. ಕಾಲಕಾಲಕ್ಕೆ ರಾಜಕಾಲುವೆ, ರಸ್ತೆ, ಒಳಚರಂಡಿ ವ್ಯವಸ್ಥೆಗಳನ್ನು ಅಭಿವೃದ್ಧಿ ಮಾಡಿದ್ದಾರೆ ಈ ಸಮಸ್ಯೆ ಬರುತ್ತಿರಲಿಲ್ಲ. ಕಾವೇರಿ 5ನೇ ಹಂತದ ನೀರನ್ನು, ಯುಜಿಡಿ ವ್ಯವಸ್ಥೆ ಯನ್ನು, ಕುಡಿಯುವ ನೀರಿನ ವ್ಯವಸ್ಥೆ, ಹಾಗೂ ರಸ್ತೆಗಳನ್ನು ಅಭಿವೃದ್ಧಿ ಮಾಡುವುದು ನಮ್ಮ ಮುಂದಿರುವ ಸವಾಲು. ಈ ಸವಾಲನ್ನು ಸ್ವೀಕರಿಸಿದ್ದು, ಈಗಾಗಲೇ ಎಲ್ಲ ಕಡೆ ಕೆಲಸ ಪ್ರಾರಂಭವಾಗಿದೆ. ಬರುವ ದಿನಗಳಲ್ಲಿ ಬೆಂಗಳೂರನ್ನು ಸುಂದರ ನಗರವನ್ನಾಗಿಸಲಾಗುವುದು. ಜನಕ್ಕೆ ಅನುಕೂಲವಾಗುವ ಎಲ್ಲ ಕಾಮಗಾರಿ ಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.