ಬೆಂಗಳೂರು ಸಬರ್ಬನ್ ರೈಲಿನ ವಿಚಾರದಲ್ಲಿ ರಾಜಕೀಯ ನಾಯಕರ ಕೆಸರೆರಚಾಟ ಮುಂದುವರಿದಿದೆ. ನಗರಕ್ಕೆ ರೈಲು ಯೋಜನೆಗೆ ಮೊನ್ನೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿ, ಇದು ಬಿಜೆಪಿಯ ಕೊಡುಗೆ ಎಂದು ಹೇಳಿದ್ದರು.
ಆದರೆ, ಇದು ನಿಮ್ಮ ಯೋಜನೆಯಲ್ಲ. ಈ ಉಪನಗರ ರೈಲು ಪರಿಕಲ್ಪನೆ ಮಾಜಿ ಪ್ರಧಾನಿ ದೇವೇಗೌಡರದ್ದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಹಾಸನದಲ್ಲಿ ಮಾತನಾಡಿದ ಕುಮಾರಸ್ವಾಮಿ, ಉಪನಗರ ರೈಲು ಯೋಜನೆ ಬಗ್ಗೆ ಬಿಜೆಪಿ ನಾಯಕರು ಸುಳ್ಳು ಹೇಳಿ ಪ್ರಚಾರ ಪಡೆಯುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಬ್ರಿಟೀಷ್ ಅಧಿಕಾರದಲ್ಲಿ ದೇಶವನ್ನು ಒಡೆಯುವ ಕೆಲಸವಾಯಿತು. ಅವತ್ತು ಅನೇಕರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ ಪ್ರಾಣ ತೆತ್ತರು. ಈ ದೇಶ ಸ್ವಾತಂತ್ರ್ಯ ಕಂಡಾಗಿನಿಂದ ಇಲ್ಲಿಯವರೆಗೆ ನಿರಂತರ ಅಭಿವೃದ್ಧಿ ಕಂಡಿದೆ. ಮೊದಲ ಪ್ರಧಾನಿ ಜವಾಹರ ಲಾಲ್ ನೆಹರು ಅವರಿಂದ ಇಂದಿನವರೆಗೆ ಎಲ್ಲ ಪ್ರಧಾನಿಗಳಿಂದ ಅಭಿವೃದ್ಧಿ ಕೆಲಸಗಳು ಆಗಿವೆ. ಮೋದಿ ಒಬ್ಬರಿಂದಲೇ ಅಥವಾ ಅವರು ಅಧಿಕಾರಕ್ಕೆ ಬಂದ 8 ವರ್ಷಗಳಿಂದಲೇ ಆಗಿಲ್ಲ ಎನ್ನುವುದನ್ನು ಅವರು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಇಂದು ಮೋದಿ ಅವರು ಎಲ್ಲವೂ ನನ್ನಿಂದಲೇ ಆಗುತ್ತಿದೆ ಎನ್ನುತ್ತಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ಪಕ್ಷಾತೀತ ನಿಲುವು ಹೊಂದಿರಬೇಕು ಎಂದು ಸಲಹೆ ನೀಡಿದರು.
ಬೆಂಗಳೂರಿನಲ್ಲಿ 33 ಸಾವಿರ ಕೋಟಿ ರೂ. ಮೊತ್ತದ ಅನುದಾನದ ಕಾರ್ಯಕ್ರಮಕ್ಕೆ ಶಂಕುಸ್ಥಾಪನೆ ಮಾಡಿದ್ದೇವೆ ಎಂದು ಪ್ರಧಾನಿ ಭಾಷಣ ಮಾಡಿದ್ದಾರೆ. ಇದರಲ್ಲಿ ಮೋದಿ ಅವರ ಕೊಡುಗೆ ಮಾತ್ರ ಇದೆಯಾ? ಹಿಂದೆ ಇದ್ದ ಸರಕಾರಗಳ ಯೋಜನೆಗಳಿಗೆ ಅವರು ಶಂಕುಸ್ಥಾಪನೆ ಮಾಡಿದ್ದಾರೆ. ಉಪನಗರ ರೈಲು ಯೋಜನೆ ಬಗ್ಗೆ 40 ವರ್ಷ ಆಗದ ಸಾಧನೆಯನ್ನು ನಲವತ್ತು ತಿಂಗಳಲ್ಲಿ ಮಾಡುತ್ತಿದ್ದೇವೆ ಎನ್ನುತ್ತಿದ್ದಾರೆ.
ನಾನು 2018ರಲ್ಲಿ ಮುಖ್ಯಮಂತ್ರಿ ಆಗಿದ್ದಾಗಲೇ ಅಂದಿನ ರೇಲ್ವೆ ಸಚಿವರಾಗಿದ್ದ ಪಿಯೂಷ್ ಗೋಯಲ್ ಅವರನ್ನು ಭೇಟಿಯಾಗಿದ್ದೆ. ನಂತರ ಅವರನ್ನು ಬೆಂಗಳೂರಿನ ಕೃಷ್ಣಾ ಕಚೇರಿಗೇ ಕರೆಸಿ ಯೋಜನೆಯನ್ನು ಅಂತಿಮಗೊಳಿಸಲಾಯಿತು. ಆಗ ಪ್ರಧಾನಿ ಅವರಿಂದ ಶಂಕುಸ್ಥಾಪನೆ ಮಾಡಿಸಬೇಕು ಎಂದು ನಿರ್ಧಾರ ಕೈಗೊಳ್ಳಲಾಯಿತು. ದೇವೇಗೌಡರು ಪ್ರಧಾನಿ ಆಗಿದ್ದಾಗಲೇ ಈ ಯೋಜನೆ ರೂಪಿಸಲು ಮುಂದಾಗಿದ್ದರು. ಅಷ್ಟರಲ್ಲಿ ಅವರ ಸರ್ಕಾರ ಹೋಯಿತು. ಆದರೆ, ನನ್ನ ಸರ್ಕಾರದ ಅವಧಿಯಲ್ಲಿ ಯೋಜನೆಗೆ ಮರುಚಾಲನೆ ನೀಡಲಾಗಿತ್ತು ಎಂದು ಕುಮಾರಸ್ವಾಮಿ ಹೇಳಿದ್ದಾರೆ.