ಕೆಲವು ದಿನಗಳ ಹಿಂದೆ ಬೆಂಗಳೂರಿನ ಹಲವು ಶಾಲೆಗಳಿಗೆ ಇಮೇಲ್ ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದ್ದು, ಆಯಾ ಶಾಲೆಗಳ ಪ್ರಾಂಶುಪಾಲರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದರು. ಬಾಂಬ್ ನಿಷ್ಕ್ರಿಯ ದಳದೊಂದಿಗೆ ಕೂಡಲೇ ಸ್ಥಳಕ್ಕಾಗಮಿಸಿದ್ದ ಪೊಲೀಸರು ವ್ಯಾಪಕ ತಪಾಸಣೆ ಕಾರ್ಯ ನಡೆಸಿದ್ದರು.
ಆದರೆ ತಪಾಸಣೆ ಬಳಿಕ ಇದೊಂದು ಹುಸಿ ಬೆದರಿಕೆ ಎಂಬುದು ಪತ್ತೆಯಾಗಿತ್ತಾದರೂ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಬೆಂಗಳೂರು ಪೊಲೀಸರು ಇ ಮೇಲ್ ಮೂಲದ ತನಿಖೆಗೆ ಮುಂದಾಗಿದ್ದರು. ಇದೀಗ ಈ ಇ-ಮೇಲ್ ಪಾಶ್ಚಿಮಾತ್ಯ ರಾಷ್ಟ್ರದಿಂದ ಬಂದಿದೆ ಎನ್ನಲಾಗಿದ್ದು, ಬಹುತೇಕ ಪಾಕಿಸ್ತಾನ ಅಥವಾ ಸಿರಿಯಾದಿಂದ ಕಳುಹಿಸಿರಬಹುದು ಎಂದು ಊಹಿಸಲಾಗುತ್ತಿದೆ.
ಬೆಂಗಳೂರು ಪೊಲೀಸರ ಜೊತೆ ಕೇಂದ್ರ ಗುಪ್ತಚರ ದಳ ಕೂಡ ತನಿಖೆ ನಡೆಸುತ್ತಿದ್ದು, ಬೇರೆ ಬೇರೆ ಶಾಲೆಗಳಿಗೆ ಬಂದ ಬೆದರಿಕೆ ಇ ಮೇಲ್ ಒಂದೇ ಸರ್ವರ್ ನಿಂದ ಕಳಿಸಲಾಗಿದೆಯೇ ಅಥವಾ ಬೇರೆಬೇರೆ ಸರ್ವರ್ ಬಳಸಲಾಗಿದೆ ಎಂಬುದರ ಕುರಿತು ಪೊಲೀಸರು ತಂತ್ರಜ್ಞಾನ ನುರಿತ ತಂಡದ ಜೊತೆಗೆ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.