ಕರ್ನಾಟಕದಲ್ಲಿ ಕೋವಿಡ್-19 ಪ್ರಕರಣಗಳು ನಿಯಂತ್ರಣಕ್ಕೆ ಸಿಗದೆ ಹೆಚ್ಚಳವಾಗುತ್ತಿವೆ. ಅದ್ರಲ್ಲು ಬೆಂಗಳೂರಿನಲ್ಲಂತು ಇಂದು ಹದಿನೈದು ಸಾವಿರ ಪ್ರಕರಣಗಳು ವರದಿಯಾಗಿವೆ. ಈ ನಡುವೆ ವೈದ್ಯರು, ಆರೋಗ್ಯ ಕಾರ್ಯಕರ್ತರು ಸೇರಿದಂತೆ ಹಲವು ಮುಂಚೂಣಿ ಕಾರ್ಯಕರ್ತರಲ್ಲಿ ಸೋಂಕು ಹೆಚ್ಚಾಗುತ್ತಿದೆ. ಪೊಲೀಸ್ ಪಡೆಯಲ್ಲು ಸೋಂಕು ಹೆಚ್ಚಳವಾಗಿದ್ದು ಬೆಂಗಳೂರಿನ ಇನ್ನೂರಕ್ಕು ಹೆಚ್ಚು ಪೊಲೀಸ್ ಸಿಬ್ಬಂದಿ ಸೋಂಕಿಗೆ ತುತ್ತಾಗಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ಬೆಂಗಳೂರಿನಲ್ಲಿ ಇಂದು ಒಂದೇ ದಿನ 67 ಪೊಲೀಸ್ ಸಿಬ್ಬಂದಿಗೆ ಕೊರೊನಾ ಸೋಂಕು ದೃಢವಾಗಿದೆ. ಪೊಲೀಸರೆ ನೀಡಿರುವ ಡೇಟಾದ ಪ್ರಕಾರ, ಕೋವಿಡ್ 3ನೇ ಅಲೆಯಲ್ಲಿ ಇದುವರೆಗೆ 212 ಪೊಲೀಸ್ ಸಿಬ್ಬಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇತ್ತೀಚೆಗೆ ರಾಜಧಾನಿಯ ಸರ್ಕಾರಿ ಕಚೇರಿಗಳೆ ಕೊರೋನಾ ಕ್ಲಸ್ಟರ್ ಗಳಾಗಿ ಬದಲಾಗುತ್ತಿವೆ.
ಇಂದು ಎಸಿಬಿ ಕಚೇರಿಯ 15 ಸಿಬ್ಬಂದಿಯಲ್ಲಿ ಕೊರೋನಾ ಪತ್ತೆಯಾಗಿದೆ. ಜೊತೆಗೆ ಮೆಟ್ರೋ ಕೇಂದ್ರ ಕಚೇರಿಯಲ್ಲಿ ಏಳು ಜನರಲ್ಲಿ ಕೊರೋನಾ ಸೋಂಕು ದೃಢವಾಗಿದೆ. ನೆನ್ನೆ ಸಿಸಿಬಿ ಕಚೇರಿಯ 17 ಸಿಬ್ಬಂದಿ ಕೊರೋನಾ ಪಾಸಿಟಿವ್ ಆಗಿದ್ದಾರೆ. ಅಲ್ಲದೇ ನಗರದ ಹಲವು ಪೊಲೀಸ್ ಠಾಣೆಗಳಲ್ಲಿ ಹೆಚ್ಚಿನ ಪ್ರಕರಣಗಳು ಎರಡು ವಾರಗಳಿಂದ ವರದಿಯಾಗುತ್ತಿವೆ. ಕೊರೋನಾ ಹೆಚ್ಚಳವಾಗ್ತಿರೊ ಈ ಸಂದರ್ಭದಲ್ಲಿ ಸಾರ್ವಜನಿಕರನ್ನ ಕಾಪಾಡುವ ಫ್ರಂಟ್ ಲೈನ್ ಕಾರ್ಯಕರ್ತರಲ್ಲಿ ಸೋಂಕು ಹೆಚ್ಚಾಗಿ ಹರಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.