ರಾಜ್ಯ ರಾಜಧಾನಿ ಬೆಂಗಳೂರು ಮಳೆಯ ಆರ್ಭಟಕ್ಕೆ ಇನ್ನಿಲ್ಲದಂತೆ ತತ್ತರಿಸಿ ಹೋಗಿದೆ. ಬಡಾವಣೆಗಳಲ್ಲಿನ ಮನೆಗಳಿಗೆ ಆಳೆತರದಷ್ಟು ನೀರು ನುಗ್ಗಿದ್ದು ರಸ್ತೆಗಳು ಕೆರೆಗಳಂತಾಗಿವೆ. ವಾಹನ ಸಂಚಾರ ನಡೆಸುವುದೇ ದುಸ್ತರ ಎನ್ನುವಂತಾಗಿದ್ದು, ಕೆಲವೆಡೆ ಮನೆಗಳಿಂದ ಜನರನ್ನು ಏಣಿಯ ಮೂಲಕ ಹೊರ ತರಲಾಗಿದೆ.
ಮಳೆ ನೀರು ನುಗ್ಗಿರುವ ಪರಿಣಾಮ ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳು ಹಾಳಾಗಿದ್ದು, ಕುಡಿಯುವ ನೀರು, ಊಟಕ್ಕೂ ಪರದಾಡುವಂತಾಗಿದೆ. ಇದರ ಮಧ್ಯೆ ಬೆಂಗಳೂರಿನ ನಗರಕ್ಕೆ ನೀರು ಸರಬರಾಜು ಮಾಡುವ ಜಲ ಮಂಡಳಿಯ ಟಿ.ಕೆ. ಹಳ್ಳಿ ಘಟಕಕ್ಕೆ ನೀರು ನುಗ್ಗಿರುವ ಪರಿಣಾಮ ಯಂತ್ರಗಳು ಮುಳುಗಡೆಯಾಗಿದ್ದು, ಇದರಿಂದ ಇಂದು ಬೆಂಗಳೂರು ನಗರಕ್ಕೆ ನೀರು ಸರಬರಾಜು ವ್ಯತ್ಯಯವಾಗಲಿದೆ.
ನೀರು ಘಟಕವನ್ನು ದುರಸ್ತಿ ಮಾಡಲು ನಿರಂತರವಾಗಿ ಪ್ರಯತ್ನ ನಡೆಸಿದ್ದು, ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಲಗೂರು ಬಳಿ ಇರುವ ಟಿ.ಕೆ. ಹಳ್ಳಿಯ ಈ ಘಟಕಕ್ಕೆ ಸೋಮವಾರದಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಲಮಂಡಳಿ ಅಧ್ಯಕ್ಷರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ತುರ್ತು ಕಾರ್ಯಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.