
ಬೆಂಗಳೂರಿನ ಬಹುತೇಕ ರಸ್ತೆಗಳು ಅಧೋಗತಿಗೆ ತಲುಪಿವೆ. ಎಲ್ಲಿ ನೋಡಿದ್ರೂ ಹೊಂಡ ಗುಂಡಿಗಳದ್ದೇ ಕಾರುಬಾರು. ಟಾರು ಕಿತ್ತು ಬಂದು ರಸ್ತೆಗಳು ನರಕ ಸದೃಶವಾಗಿದ್ದರೂ ಬಿಬಿಎಂಪಿ ಮಾತ್ರ ಅದನ್ನು ಸರಿಪಡಿಸುವ ಗೋಜಿಗೆ ಹೋಗುವುದೇ ಇಲ್ಲ.
ಈ ಯಮಸ್ವರೂಪಿ ರಸ್ತೆಗಳಲ್ಲಿ ವಾಹನ ಚಲಾಯಿಸುವ ಸವಾರರಂತೂ ಸುಸ್ತಾಗಿ ಹೋಗಿದ್ದಾರೆ. ರಸ್ತೆಗಳ ದುಸ್ಥಿತಿಯನ್ನು ಬಿಚ್ಚಿಡುವ ಸ್ಟಿಕ್ಕರ್ ಒಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವ್ಯಕ್ತಿಯೊಬ್ಬ ತನ್ನ ಕಾರಿನ ಹಿಂಭಾಗದಲ್ಲಿ ಸ್ಟಿಕ್ಕರ್ ಅಂಟಿಸಿಕೊಂಡಿದ್ದಾನೆ.
ಕುಡಿದಿಲ್ಲ, ಕೇವಲ ಗುಂಡಿಗಳನ್ನು ತಪ್ಪಿಸುತ್ತಿದ್ದೇನೆ ಅಂತ ಸ್ಟಿಕ್ಕರ್ ಮೇಲೆ ಬರೆಯಲಾಗಿದೆ. ಹಾಸ್ಯಮಯವಾಗಿಯೇ ರಸ್ತೆಗಳ ಅವ್ಯವಸ್ಥೆಯನ್ನು ಕಾರು ಚಾಲಕ ಬಿಚ್ಚಿಟ್ಟಿದ್ದಾನೆ. ಟ್ವಿಟ್ಟರ್‌ನಲ್ಲಿ ಈ ಫೋಟೋ ಹರಿದಾಡ್ತಿದೆ. ಇದನ್ನು ಅನೇಕರು ಬಿಬಿಎಂಪಿಗೂ ಟ್ಯಾಗ್ ಮಾಡಿದ್ದಾರೆ. ಇನ್ನಾದ್ರೂ ಗುಂಡಿಗಳನ್ನು ಸರಿಪಡಿಸಿ ಅಂತ ಒತ್ತಾಯಿಸಿದ್ದಾರೆ.
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬೆಂಗಳೂರಿನ ರಸ್ತೆಗಳ ಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು, ಪಾಲಿಕೆ ಮಾತ್ರ ರಿಪೇರಿ ಕೆಲಸ ಕೈಗೆತ್ತಿಕೊಂಡಿಲ್ಲ. ಈ ಹಿಂದೆ ಬೆಂಗಳೂರಿನ ಕನಕಪುರ ರಸ್ತೆಯಲ್ಲಿ 10 ವರ್ಷಗಳಷ್ಟು ಹಳೆಯದಾದ ಗುಂಡಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದಲ್ಲದೆ ಅಂಜನಾಪುರ ರಸ್ತೆಯಲ್ಲಿ ವ್ಯಕ್ತಿಯೊಬ್ಬ ಯಮರಾಜನ ವೇಷಧಾರಿಯಾಗಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದ, ಈ ವೈರಲ್ ಪ್ರತಿಭಟನೆಗಳು ನಗರದಲ್ಲಿ ಹೊಂಡಗಳಿಂದ ಕೂಡಿದ ರಸ್ತೆಗಳು ಹೇಗೆ ಸಾವಿನ ಹಾಸಿಗೆಯಾಗಿ ಮಾರ್ಪಟ್ಟಿವೆ ಎಂಬುದನ್ನು ಅಧಿಕಾರಿಗಳಿಗೆ ತಿಳಿಸುವ ಸಾಂಕೇತಿಕ ಸಂದೇಶವಾಗಿದೆ.