ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆ ಬೆಂಗಳೂರಿಗರ ನೆಮ್ಮದಿಯನ್ನೇ ಕಿತ್ತುಕೊಂಡಿದೆ. ನಗರದ ತಗ್ಗು ಪ್ರದೇಶಗಳಿಗೆಲ್ಲ ನೀರು ನುಗ್ಗಿದ್ದು, ಜನರು ಡಿಗ್ಗಿಂಗ್ ಮಷಿನ್ ಮತ್ತು ಟ್ರ್ಯಾಕ್ಟರ್‌ಗಳ ನೆರವು ಪಡೆದುಕೊಳ್ಳಬೇಕಾಗಿ ಬಂದಿದೆ.
ರಸ್ತೆಗಳಲ್ಲಿ ಸಹ ನೀರು ತುಂಬಿ ಹರಿಯುತ್ತಿದ್ದು, ದೋಣಿಗಳ ಮೂಲಕ ಸಂಚರಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವಾರು ಸಂಸ್ಥೆಗಳು ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಸೂಚಿಸಿವೆ. ಕೆಲವು ಕಡೆ ಜನರು ಜೆಸಿಬಿ ಮೇಲೇರಿ ಹೋಗುತ್ತಿರುವ ದೃಶ್ಯ ಕೂಡ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.
ಈ ವೀಡಿಯೊವನ್ನು ಟ್ವಿಟರ್ ಬಳಕೆದಾರರು ಹಂಚಿಕೊಂಡಿದ್ದಾರೆ. ಉದ್ಯಮಿ ಆನಂದ್ ಮಹೀಂದ್ರಾ ಸೇರಿದಂತೆ ಹಲವರು ಈ ವಿಡಿಯೋಗೆ ಕಮೆಂಟ್ ಮಾಡಿದ್ದಾರೆ. ಬೆಂಗಳೂರು ಈ ಕಾರಣಕ್ಕಾಗಿಯೇ ಇನ್ನೋವೇಶನ್ ಹಬ್ ಎನಿಸಿಕೊಂಡಿದೆ ಅಂತಾ ಆನಂದ್ ಮಹಿಂದ್ರಾ ಕಮೆಂಟ್ ಮಾಡಿದ್ದರು. ಆದ್ರೆ ನೆಟ್ಟಿಗರು ಈ ಅಭಿಪ್ರಾಯವನ್ನು ಬೆಂಬಲಿಸಿಲ್ಲ. ಬಿಬಿಎಂಪಿ ಹಾಗೂ ಸರ್ಕಾರದ ಬೇಜವಾಬ್ಧಾರಿಯಿಂದ್ಲೇ ಬೆಂಗಳೂರಿಗೆ ಈ ದುರ್ಗತಿ ಬಂದಿದೆ ಅನ್ನೋದು ನೆಟ್ಟಿಗರ ಅಭಿಪ್ರಾಯ.
ಬೆಳ್ಳಂದೂರು ಪ್ರದೇಶದಲ್ಲಿ ಜೆಸಿಬಿಯ ಮುಂಭಾಗದ ಬಕೆಟ್‌ನಲ್ಲಿ ಕುಳಿತು ಜನರು ಪ್ರಯಾಣಿಸುವ ದೃಶ್ಯಗಳು ವೈರಲ್ ಆಗಿವೆ. ಮನಸ್ಸಿದ್ದಲ್ಲಿ ಮಾರ್ಗವಿದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯೆಂದು ಆನಂದ್ ಮಹಿಂದ್ರಾ ಟ್ವೀಟ್ ಮಾಡಿದ್ದರು. ಆದ್ರೆ ಭಾರತದ ಸಿಲಿಕಾನ್ ವ್ಯಾಲಿ ಎನಿಸಿಕೊಂಡಿರೋ ಬೆಂಗಳೂರಲ್ಲಿ ಲಕ್ಷಾಂತರ ಜನರ ಜೀವನವು ಅಸ್ತವ್ಯಸ್ತಗೊಂಡಿದೆ. ಧಾರಾಕಾರ ಮಳೆಯು ನಗರದ ಮೂಲಸೌಕರ್ಯಗಳ ಅವ್ಯವಸ್ಥೆಯನ್ನು ಬಹಿರಂಗಪಡಿಸಿದೆ. ಇಂಥಾ ಕಠಿಣ ಸ್ಥಿತಿ ನಿರ್ಮಾಣವಾಗಿರುವುದರಿಂದ ಮಹೀಂದ್ರಾ ಅವರ ಟ್ವೀಟ್‌ಗೆ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಿನ ಬೆಂಬಲ ಸಿಗಲಿಲ್ಲ. ಬಹುಪಾಲು ಜನರು ಬಿಬಿಎಂಪಿ ಮತ್ತು ಸರ್ಕಾರವನ್ನು ಟೀಕಿಸಿದ್ದಾರೆ.