ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದೆ ಎಂಬ ಕಾರಣಕ್ಕೆ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಮನೆಯಿಂದ ಸೋಮವಾರ ನಾಪತ್ತೆಯಾಗಿದ್ದ 14 ವರ್ಷದ ಬಾಲಕಿ ಬುಧವಾರದಂದು ಗೋವಾದಲ್ಲಿ ಪತ್ತೆಯಾಗಿದ್ದಾಳೆ.
ಬೆಂಗಳೂರಿನಿಂದ ಬಸ್ ಮೂಲಕ ಬೆಳಗಿನ ಜಾವ 3 ಗಂಟೆಗೆ ಮಂಗಳೂರಿಗೆ ಬಂದಿದ್ದ ಈ ಬಾಲಕಿ ಅಲ್ಲಿಂದ ಆಟೋದಲ್ಲಿ ಬೀಚಿಗೆ ಹೋಗಿ ಮತ್ತೆ ಬಸ್ ನಿಲ್ದಾಣಕ್ಕೆ ಬಂದಿದ್ದು, ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು. ಆಟೋ ಚಾಲಕ ಪ್ರಶ್ನಿಸಿದ ವೇಳೆ ಚಿಕ್ಕಮ್ಮನ ಮನೆಗೆ ಬಂದಿರುವುದಾಗಿ ಆಕೆ ಸುಳ್ಳು ಹೇಳಿದ್ದಳು.
ಸಿಸಿ ಟಿವಿ ದೃಶ್ಯಾವಳಿ ಪರಿಶೀಲಿಸಿದ ಬಳಿಕ ಬೆಂಗಳೂರು ಪೊಲೀಸರು ಬಾಲಕಿಗಾಗಿ ಮಂಗಳೂರು ಹಾಗೂ ಧರ್ಮಸ್ಥಳದಲ್ಲಿ ಹುಡುಕಾಟ ನಡೆಸಿದ್ದರಾದರೂ ಪ್ರಯೋಜನವಾಗಿರಲಿಲ್ಲ. ಇದೀಗ ಆಕೆ ಗೋವಾದಲ್ಲಿ ಪತ್ತೆಯಾಗಿದ್ದಾಳೆ ಎನ್ನಲಾಗಿದ್ದು, ವಾಪಸ್ ಬೆಂಗಳೂರಿಗೆ ಕರೆದುಕೊಂಡು ಹೋಗಲಾಗಿದೆ ಎಂದು ತಿಳಿದು ಬಂದಿದೆ.