ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಡೆಲ್ಟಾ-ಒಮಿಕ್ರಾನ್ ಸಹ-ಸೋಂಕಿನ ಎರಡು ಪ್ರಕರಣಗಳು ಪತ್ತೆಯಾಗಿವೆ ಎಂದು ವರದಿಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಆಸ್ಪತ್ರೆಯ ಅಧಿಕಾರಿಗಳು, ಇಬ್ಬರು ರೋಗಿಗಳನ್ನು ಡಿಸ್ಚಾರ್ಜ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಸಹ-ಸೋಕಿನ ರೋಗಿಗಳಲ್ಲಿ, ಯಾವುದೇ ಗಂಭೀರ ಲಕ್ಷಣಗಳು ಅಥವಾ ಕಾಂಪ್ಲಿಕೇಷನ್ಸ್ ನಮ್ಮ ಗಮನಕ್ಕೆ ಬಂದಿಲ್ಲ ಎಂದು ಆಸ್ಪತ್ರೆ ಡೀನ್ ಮನೋಜ್ ಕುಮಾರ್ ತಿಳಿಸಿದ್ದಾರೆ. ಭಾರತೀಯ SARS-CoV-2 ಜೀನೋಮಿಕ್ಸ್ ಕನ್ಸೋರ್ಟಿಯಂ (INSACOG) ನೆಟ್‌ವರ್ಕ್‌ನಿಂದ ಡೆಲ್ಟಾ-ಒಮಿಕ್ರಾನ್ ಸಹ-ಸೋಂಕಿನ ಕೆಲವು ಪ್ರಕರಣಗಳು ಕೇಂದ್ರ ಸರ್ಕಾರದ ಗಮನಕ್ಕೆ ಬಂದ ನಂತರ, ರಾಜ್ಯದಲ್ಲೂ ಇಂತಾ ಪ್ರಕರಣಗಳು ಪತ್ತೆಯಾಗಬಹುದೆಂದು ಜೀನೋಮಿಕ್ ಸೀಕ್ವೆಂನ್ಸಿಂಗ್ ಹೆಚ್ಚಿಸಲಾಗಿದೆ.
ಈ ಸಂಬಂಧ ರಾಜ್ಯ ಆರೋಗ್ಯ ಆಯುಕ್ತರು, ರಾಜ್ಯದಲ್ಲಿ ಇದೇ ರೀತಿಯ ಪ್ರಕರಣಗಳನ್ನು ಪರಿಶೀಲಿಸಿ ಎಂದು ತಾಂತ್ರಿಕ ಸಲಹಾ ಸಮಿತಿಯನ್ನು ಕೇಳಿದ್ದಾರೆ. ಸಹ ಸೋಂಕಿಗೆ ಸಂಬಂಧಿಸಿದಂತೆ, ಕೋವಿಡ್ ಮಾದರಿಗಳು ಕಲುಷಿತವಾಗಿರಬಹುದು” ಎಂದು ಆರೋಗ್ಯ ಆಯುಕ್ತ ಡಿ ರಂದೀಪ್ ಹೇಳಿದ್ದಾರೆ.
ಕೊರೋನಾ ಜೊತೆಗೆ ಇತರ ಖಾಯಿಲೆಗಳಿಂದ ಬಳಲಿ ಜನವರಿ ತಿಂಗಳಲ್ಲಿ ಸಾವನ್ನಪ್ಪಿರುವ ಅಥವಾ 60 ವರ್ಷಕ್ಕಿಂತ ಮೇಲ್ಪಟ್ಟ ರೋಗಿಗಳ ಜೀನೋಮಿಕ್ ಸೀಕ್ವೇನ್ಸಿಂಗ್ ವರದಿಗಳನ್ನು ಪರಿಶೀಲಿಸಲು ರಾಜ್ಯ ಕಣ್ಗಾವಲು ಘಟಕವನ್ನು ಕೇಳಲಾಗಿದೆ. ಆರೋಗ್ಯ ಇಲಾಖೆಗೆ ಇಷ್ಟು ದಿನಗಳ ಕಾಲ ತಲೆನೋವಾಗಿದ್ದ ಒಮಿಕ್ರಾನ್, ಈಗ ಡೆಲ್ಟಾದೊಂದಿಗೆ ಬೆರೆತು ಸೋಂಕು ಪತ್ತೆ ಹಚ್ಚುವುದನ್ನು ಮತ್ತಷ್ಟು ಕ್ಲಿಷ್ಟಕರವಾಗಿಸಿದೆ.