ನಕಲಿ ಅಧಿಕಾರಿ ಸೋಗಿನಲ್ಲಿ ಬಂದು ಇಡೀ ಮನೆಯನ್ನ ಕೊಳ್ಳೆ ಹೊಡೆಯುವ ಕಥಾಹಂದವಿರುವ, ಸ್ಪೆಷಲ್26 ಸಿನಿಮಾ ನೋಡಿದವ್ರಿಗೆ ನಿಜ ಜೀವನದಲ್ಲಿ ಹೀಗೆ ಆಗೋಕೆ ಸಾಧ್ಯವಾ ಅನ್ನೋ ಪ್ರಶ್ನೆ ಕಾಡುತ್ತೆ. ನೈಜ ಜೀವನದಲ್ಲೂ ಇಂತಾ ಘಟನೆಗಳು ನಡೆಯಬಹುದು ಎಂದು ಬೆಂಗಳೂರಿನಲ್ಲಿ ನಡೆದಿರೋ ಘಟನೆಯಿಂದ ಸಾಬೀತಾಗಿದೆ.
ಬೆಂಗಳೂರಿನ ಸಂಜಯನಗರದಲ್ಲಿರುವ ಮನೆಯೊಂದಕ್ಕೆ ಐಟಿ ಅಧಿಕಾರಿಗಳ ಸೋಗಿನಲ್ಲಿ ನುಗ್ಗಿದ ದುಷ್ಕರ್ಮಿಗಳು ಲಕ್ಷಾಂತರ ಹಣದ ಜೊತೆಗೆ ಪಿಸ್ತೂಲ್ ಎತ್ಕೊಂಡು ಪರಾರಿಯಾಗಿದ್ದಾರೆ. ಚೇತನ್ ಎಂಬುವವರು ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಘಟನೆಯ ವಿವರ ನೋಡುವುದಾದರೆ ಜನವರಿ 23ನೇ ತಾರೀಖಿನಂದು ಸಂಜಯನಗರದ RMV 2ನೇ ಸ್ಟೇಜ್ ನಲ್ಲಿರುವ ಚೇತನ್ ಎಂಬುವವರ ಮನೆಗೆ ಕೆಲ ದುಷ್ಕರ್ಮಿಗಳು ನುಗ್ಗಿ ತಮ್ಮನ್ನು ತಾವು ಐಟಿ ಅಧಿಕಾರಿಗಳೆಂದು ಪರಿಚಯಿಸಿಕೊಂಡಿದ್ದಾರೆ. ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದ ಚೇತನ್ ತಂದೆ ಕಳೆದ ವರ್ಷ ತೀರಿಕೊಂಡಿದ್ದರು. ಅವರ ಸಾವಿನ ನಂತರ ಕಚೇರಿಯಲ್ಲಿದ್ದ ಕೆಲವು ದಾಖಲೆಗಳನ್ನು ತಂದು ಮನೆಯಲ್ಲಿ ಇಟ್ಟುಕೊಳ್ಳಲಾಗಿತ್ತು.
ಈ ಬಗ್ಗೆ ತಿಳಿದುಕೊಂಡಿದ್ದ ದುಷ್ಕರ್ಮಿಗಳು ಐಟಿ ಅಧಿಕಾರಿಗಳ ಸೋಗಿನಲ್ಲಿ ಬಂದು, ಬೆದರಿಸಿ 3.5 ಲಕ್ಷ ನಗದು, ಒಂದು ಪಿಸ್ತೂಲ್ ಎತ್ತಿಕೊಂಡು ಪರಾರಿಯಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಂಡಿರುವ ಪೊಲೀಸರು ದುಷ್ಕರ್ಮಿಗಳ ಪತ್ತೆಗಾಗಿ ಕಾರ್ಯಾಚರಣೆಗೆ ಇಳಿದಿದ್ದಾರೆ.