ಬೆಂಗಳೂರಲ್ಲಿ ಟ್ರಾಫಿಕ್ ಕಿರಿಕಿರಿಗೆ ಕಡಿವಾಣ ಹಾಕಲು ಕರ್ನಾಟಕ ಸರ್ಕಾರ ಮತ್ತೊಂದು ಫ್ಲೈಓವರ್ ನಿರ್ಮಾಣಕ್ಕೆ ಮುಂದಾಗಿದೆ. ಔಟರ್ ರಿಂಗ್ ರೋಡ್ ಮತ್ತು ವೆಸ್ಟ್ ಆಫ್ ಕಾರ್ಡ್ ರೋಡನ್ನು ಕುರುಬರಹಳ್ಳಿ ಪೈಪ್ಲೈನ್ ರಸ್ತೆಗೆ ಸಂಪರ್ಕಿಸುವ ಮೇಲ್ಸೇತುವೆಗೆ ಶಂಕುಸ್ಥಾಪನೆ ನೆರವೇರಿದೆ. ಅರ್ಧ ಕಿಲೋಮೀಟರ್ ಉದ್ದದ ಈ ಮೇಲ್ಸೇತುವೆಯಿಂದ ಔಟರ್ ರಿಂಗ್ ರೋಡ್ನಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಿ ವಾಹನಗಳ ಸಂಚಾರಕ್ಕೆ ಅನುಕೂಲವಾಗಲಿದೆ.
ಸಿಎಂ ಬಸವರಾಜ ಬೊಮ್ಮಾಯಿ ಶಂಕುಸ್ಥಾಪನೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.ರಾಜ್ಯದ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಈ ಬಗ್ಗೆ ಜಾಲತಾಣದಲ್ಲಿ ಪೋಸ್ಟ್ ಕೂಡ ಮಾಡಿದ್ದಾರೆ. 5.50 ಕೋಟಿ ವೆಚ್ಚದಲ್ಲಿ ನಗರೋತ್ಥಾನ ಯೋಜನೆಯಡಿ ಈ ಮೇಲ್ಸೇತುವೆಯನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಮೇಲ್ಸೇತುವೆಯು ಔಟರ್ ರಿಂಗ್ ರೋಡ್ನಿಂದ ಮಹಾಲಕ್ಷ್ಮಿ ಲೇಔಟ್ ಮತ್ತು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ವೆಸ್ಟ್ ಆಫ್ ಕಾರ್ಡ್ ರೋಡ್ಗೆ ಸಂಪರ್ಕ ಕಲ್ಪಿಸುತ್ತದೆ.
ಹೊಸ ಮೇಲ್ಸೇತುವೆಯಿಂದ ನಾಗರಭಾವಿ, ಕುರುಬರಹಳ್ಳಿ, ರಾಜಾಜಿನಗರ ಹಾಗೂ ಮಹಾಲಕ್ಷ್ಮಿ ಲೇಔಟ್ನ ಜನರು ಪ್ರತಿನಿತ್ಯ ಔಟರ್ ರಿಂಗ್ ರೋಡ್ಗೆ ಸಂಚರಿಸಲು ಅನುಕೂಲವಾಗಲಿದೆ. ಹೊಸ ಮೇಲ್ಸೇತುವೆಗೆ ಯಾವುದೇ ಖಾಸಗಿ ಸಂಸ್ಥೆಗಳಿಂದ ಭೂಸ್ವಾಧೀನ ಅಗತ್ಯವಿಲ್ಲ. ಜೂನ್ನಲ್ಲಿ ಬೆಂಗಳೂರಿಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ, ನಗರದಾದ್ಯಂತ ವಿವಿಧ ಮೂಲಸೌಕರ್ಯ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ವಾಹನ ದಟ್ಟಣೆಯನ್ನು ನಿವಾರಿಸಲು 40 ತಿಂಗಳ ಗಡುವನ್ನು ಕರ್ನಾಟಕ ಸರ್ಕಾರಕ್ಕೆ ವಿಧಿಸಿದ್ದರು.
ಇನ್ನೊಂದೆಡೆ ಪೀಕ್ ಅವರ್ನಲ್ಲಿ ಸಂಚಾರ ಸುಗಮಗೊಳಿಸಲು ಔಟರ್ ರಿಂಗ್ ರೋಡ್ನ ಆರ್ಎಂಜೆಡ್ ಇಕೋ ಸ್ಪೇಸ್ ಬಳಿ ಸಂಪೂರ್ಣವಾಗಿ ಪ್ಲಾಸ್ಟಿಕ್ ತ್ಯಾಜ್ಯದಿಂದ ನಿರ್ಮಿಸಲಾದ ರಸ್ತೆಯನ್ನು ಉದ್ಘಾಟಿಸಲಾಗಿದೆ. ಪ್ಲಾಸ್ಟಿಕ್ ತ್ಯಾಜ್ಯದಿಂದ ನಿರ್ಮಾಣವಾಗಿರುವ ಬೆಂಗಳೂರಿನ ಮೊದಲ ರಸ್ತೆ ಇದಾಗಿದೆ.