
ಸಿಹಿ ತಿನಿಸು ಏನಾದರೂ ಮಾಡಬೇಕಾದಾಗ ಕೆಲವೊಂದಕ್ಕೆ ಬೂರ ಸಕ್ಕರೆ ಉಪಯೋಗಿಸುತ್ತೇವೆ. ಇದನ್ನು ಮಾರುಕಟ್ಟೆಯಿಂದ ತಂದು ಉಪಯೋಗಿಸುವ ಬದಲು ಮನೆಯಲ್ಲಿಯೇ ಸುಲಭವಾಗಿ ಮಾಡಿಕೊಳ್ಳಬಹುದು.
ಬೇಕಾಗುವ ಸಾಮಗ್ರಿಗಳು:
1 ಕಪ್ – ಸಕ್ಕರೆ, 5 ಟೇಬಲ್ ಸ್ಪೂನ್ – ನೀರು, ½ ಟೀ ಸ್ಪೂನ್ – ತುಪ್ಪ.
ಮಾಡುವ ವಿಧಾನ:
ಒಂದು ಬಾಣಲೆ ತೆಗೆದುಕೊಂಡು ಅದಕ್ಕೆ ನೀರು, ಸಕ್ಕರೆ ಹಾಕಿ ಸಣ್ಣ ಉರಿಯಲ್ಲಿ ಕೈಯಾಡಿಸುತ್ತಾ ಬಿಸಿ ಮಾಡಿಕೊಳ್ಳಿ. ಸಕ್ಕರೆ ಕರಗಿ ಇದು ನಿಧಾನಕ್ಕೆ ಗಟ್ಟಿಯಾಗುತ್ತ ಬರುತ್ತದೆ. ನಂತರ ಸಕ್ಕರೆ ಹರಳುಗಟ್ಟುವುದಕ್ಕೆ ಶುರುವಾಗುತ್ತದೆ. ಆವಾಗ ಇದಕ್ಕೆ ತುಪ್ಪ ಹಾಕಿ ಮಿಕ್ಸ್ ಮಾಡಿ.
ನಂತರ ಗ್ಯಾಸ್ ಆಫ್ ಮಾಡಿ ತಣ್ಣಗಾಗಲು ಬಿಟ್ಟುಬಿಡಿ. ಆದರೆ ಕೈಯಾಡಿಸುವುದನ್ನು ಬಿಡಬೇಡಿ. ಒಂದು ಸೌಟಿನ ಸಹಾಯದಿಂದ ಚೆನ್ನಾಗಿ ಇದನ್ನು ಮಿಕ್ಸ್ ಮಾಡುತ್ತಲೇ ಇರಿ. ನಂತರ ಇದು ಪೌಡರ್ ರೀತಿ ಆಗುತ್ತದೆ. ಆಗ ಬೂರ ಸಕ್ಕರೆ ರೆಡಿ. ಇದನ್ನು ನೀವು ಡಬ್ಬದಲ್ಲಿ ತುಂಬಿ 20 ದಿನಗಳ ತನಕ ಇಡಬಹುದು.