ಮಜ್ಜಿಗೆ ಹುಳಿ ಎಂದ್ರೆ ಕೆಲವರ ಬಾಯಲ್ಲಿ ನೀರು ಬರುತ್ತದೆ. ಬಿಸಿ ಅನ್ನದ ಜತೆ ಮಜ್ಜಿಗೆ ಹುಳಿ ಹಾಕಿಕೊಂಡು ಊಟ ಮಾಡುತ್ತಿದ್ದರೆ ಅದರ ರುಚಿನೇ ಬೇರೆ. ಹಾಗಿದ್ದರೆ ನೀವೂ ಮಜ್ಜಿಗೆ ಹುಳಿ ಸವಿಯಬೇಕಾ…? ಮಾಡುವ ವಿಧಾನ ಇಲ್ಲಿದೆ ನೋಡಿ.
ಬೇಕಾಗುವ ಸಾಮಗ್ರಿಗಳು:
2 ಕಪ್ ನಷ್ಟು ಬೂದುಕುಂಬಳಕಾಯಿಯನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಿ. ಒಂದು ಅಗಲವಾದ ಪಾತ್ರೆಗೆ 3 ಕಪ್ ನೀರು ಹಾಕಿ ಅದಕ್ಕೆ ಸ್ವಲ್ಪ ಉಪ್ಪು, ¼ ಟೀ ಸ್ಪೂನ್ ಅರಿಶಿನ ಹಾಕಿ ಹದ ಉರಿಯಲ್ಲಿ ಬೇಯಲು ಇಡಿ. ನಂತರ ಒಂದು ಮಿಕ್ಸಿ ಜಾರಿಗೆ ½ ಕಪ್ ತೆಂಗಿನಕಾಯಿ ತುರಿ, ಟೇಬಲ್ ಸ್ಪೂನ್ ಕೊತ್ತಂಬರಿಸೊಪ್ಪು, 1.5 ಟೇಬಲ್ ಸ್ಪೂನ್ ಕಡಲೆಬೇಳೆ (ಇದನ್ನು 2 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಟ್ಟಿರಬೇಕು), 4 ಹಸಿಮೆಣಸು, ½ ಟೀ ಸ್ಪೂನ್ ಧನಿಯಾ ಬೀಜ, 1 ಟೀ ಸ್ಪೂನ್ ಜೀರಿಗೆ ಹಾಕಿ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.
ಬೂದು ಕುಂಬಳಕಾಯಿ ಬೆಂದ ಮೇಲೆ ಅದಕ್ಕೆ ರುಬ್ಬಿಕೊಂಡ ಮಸಾಲೆ ಹಾಕಿ ಸ್ವಲ್ಪ ನೀರು ಸೇರಿಸಿ ಸಣ್ಣ ಉರಿಯಲ್ಲಿ ಕುದಿಸಿ. ನಂತರ 1.5 ಕಪ್ ಮಜ್ಜಿಗೆ ಸೇರಿಸಿ ಸಣ್ಣ ಉರಿಯಲ್ಲಿ 10 ನಿಮಿಷಗಳ ಕಾಲ ಕುದಿಸಿ. ರುಚಿಗೆ ತಕ್ಕ ಷ್ಟು ಉಪ್ಪು ಸೇರಿಸಿ. ಗ್ಯಾಸ್ ಆಫ್ ಮಾಡಿ.
ನಂತರ ಒಗ್ಗರಣೆ ಸೌಟಿಗೆ 1 ಟೀ ಸ್ಪೂನ್ ಎಣ್ಣೆ ಹಾಕಿ ಅದಕ್ಕೆ ¼ ಟೀ ಸ್ಪೂನ್ ಸಾಸಿವೆ, 5 ಎಲೆ ಕರಿಬೇವು, 1 ಒಣಮೆಣಸು ಹಾಕಿ ಒಗ್ಗರಣೆ ತಯಾರಿಸಿ ಅದನ್ನು ಮಜ್ಜಿಗೆ ಹುಳಿಗೆ ಸೇರಿಸಿ.